ಕಣಿವೆ, ಡಿ. 14: ಮಕ್ಕಳು ಸರ್ಕಾರಿ ಶಾಲೆಗಳಿಗೆ ಹೋಗದ ಕಾರಣ ಜಿಲ್ಲೆಯ ಅನೇಕ ಕಡೆಗಳಲ್ಲಿ ಅನೇಕ ಶಾಲೆಗಳು ಈಗಾಗಲೇ ಮುಚ್ಚಿವೆ ಹಾಗೂ ಇನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ಶಾಲೆಗಳು ಮುಚ್ಚುವ ಹಂತ ತಲಪಿವೆ. ಇನ್ನೊಂದೆಡೆ ಕೆಲವು ಶಾಲೆಗಳಲ್ಲಿ ಮಕ್ಕಳೇ ಇಲ್ಲದೆ ಕೇವಲ ಎರಡರಿಂದ ಮೂರು ಮಕ್ಕಳಿರುವ ಉದಾಹರಣೆಗಳು ಇವೆ. ಆದರೆ ಇಲ್ಲೊಂದು ಸರ್ಕಾರಿ ಶಾಲೆ ಇದೆ. ಆ ಶಾಲೆಗೆ ಮಕ್ಕಳು ದಿನಂಪ್ರತಿ ಆಟೋದಲ್ಲೇ ತೆರಳಬೇಕು. ಆ ಮಕ್ಕಳ ಪೋಷಕರು ವಾರವಿಡೀ ತೋಟಗಳಲ್ಲಿ ಕೂಲಿ ಮಾಡುವ ಜೇನು ಕುರುಬರು. ಮಕ್ಕಳನ್ನು ಶಾಲೆಗೆ ಕರೆದೊಯ್ಯುವ ಬಾಬ್ತಿನ ಹಣವನ್ನು ವಾರಕ್ಕೊಮ್ಮೆ ಆ ಆಟೋದವನಿಗೆ ನೀಡಲೇಬೇಕು. ಇಲ್ಲದಿದ್ದರೆ ಆ ಆಟೋ ಆ ಊರಿಗೆ ಬರುವದೇ ಇಲ್ಲ.

ಇದು ಯಾವ ಊರು ಅಂದುಕೊಂಡ್ರ. ನಾಕೂರು-ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೇರೂರು. ಇಲ್ಲಿ ಮೂವತ್ತೆಂಟು ಜೇನು ಕುರುಬರ ಕುಟುಂಬಗಳಿವೆ. ಸುತ್ತಲೂ ಅರಣ್ಯದಿಂದ ಆವರಿಸಿರುವ ಈ ಹೇರೂರು ಸರ್ಕಾರಿ ಶಾಲೆ ಹಾಡಿಯಿಂದ ಮೂರು ಕಿ.ಮೀ. ದೂರದಲ್ಲಿದೆ. ಆ ಶಾಲೆಗೆ ಈ ಹಾಡಿಯಿಂದ 20 ಕ್ಕೂ ಹೆಚ್ಚು ಮಕ್ಕಳು ವಿವಿಧ ತರಗತಿಗಳಿಗೆ ದಾಖಲಾಗಿದ್ದಾರೆ. ಆದರೆ ಆ ಮಕ್ಕಳ ಪಾಲಕರು ಬೆಳಗಾಯಿತೆಂದರೆ ಕೂಲಿ ಮಾಡಲು ತೆರಳಬೇಕಾದ ಕಾರಣ ಮಕ್ಕಳ ಓದು ಬರಹ, ಶಾಲೆಗೆ ಕಳಿಸುವ ಬಗ್ಗೆ ಅಷ್ಟಾಗಿ ತಲೆಗೆ ಹಾಕಿಕೊಳ್ಳಲ್ಲ. ತಾವಾಯಿತು. ತಮ್ಮ ಕೆಲಸವಾಯಿತು. ಆದಾಗ್ಯೂ ಏಳನೇ ಹೊಸಕೋಟೆಯ ಆಟೋ ನಿಲ್ದಾಣದ ಸುರೇಂದ್ರನ್ ಎಂಬ ಚಾಲಕರನ್ನು ಗೊತ್ತುಪಡಿಸಿರುವ ಈ ಹಾಡಿಯ ಕೆಲವು ಪೋಷಕರು ವಾರಕ್ಕೊಮ್ಮೆ ಮಗುವೊಂದಕ್ಕೆ ತಲಾ 100 ರೂ.ನಂತೆ ತಿಂಗಳಿಗೆ ರೂ. 400 ಕೊಟ್ಟು ಶಾಲೆಗೆ ಸಂಕಟದಿಂದ ಕಳಿಸುತ್ತಿದ್ದಾರೆ.

ಇನ್ನು ಕೆಲವರು ಆಟೋದವರಿಗೆ ಮಕ್ಕಳನ್ನು ಶಾಲೆಗೆ ಕರೆದೊಯ್ದು ವಾಪಸ್ ಕರೆತರುವ ಬಾಡಿಗೆ ಹಣ ಕೊಡಲಾರದೇ ಶಾಲೆಗೆ ಕಳಿಸುತ್ತಿಲ್ಲ. ಆಟೋ ಚಾಲಕ ಸುರೇಂದ್ರನ್ ಹೇರೂರು ಶಾಲೆಗೆ ಕುಶಾಲನಗರದಿಂದ ಬರುವ ಶಿಕ್ಷಕಿಯೋರ್ವರನ್ನು ಏಳನೇ ಹೊಸಕೋಟೆಯ ಆಟೋ ನಿಲ್ದಾಣದಿಂದ ಶಾಲೆಗೆ ಕರೆತಂದು ಬಿಟ್ಟು ಅದೇ ಆಟೋದಲ್ಲಿ ಮತ್ತೆ ಮೂರು ಕಿಮೀ ದೂರ ಶಾಲೆಗೆ ಕ್ರಮಿಸಿ ಅಲ್ಲಿ ಕಾದು ಕುಳಿತ ಮಕ್ಕಳನ್ನು ಶಾಲೆಗೆ ತಂದು ಬಿಡುತ್ತಾರೆ. ಆ ಹಾಡಿಯ ಪೋಷಕರನೇಕರ ಪ್ರಕಾರ ಹಾಡಿಯಲ್ಲಿನ ಹೆಚ್ಚು ಮಕ್ಕಳು ಶಾಲೆಗೆ ಸೇರಿ ಅಕ್ಷರ ಕಲಿಯಬೇಕೆಂದಾದರೆ ಹಾಡಿಯಲ್ಲೇ ಶಾಲೆಯನ್ನು ತೆರೆಯಲಿ. ಕಾಡು ರಸ್ತೆಯನ್ನು ಸುತ್ತಿ ಆಟೋದಲ್ಲಿ ತ್ರಾಸಪಟ್ಟು ಮಕ್ಕಳು ತೆರಳುವದು ತಪ್ಪಲಿ.

ಕೂಲಿ ಮಾಡುವ ಜೇನುಕುರುಬ ಜನರಾದ ನಾವು ನಮ್ಮ ಮಕ್ಕಳನ್ನು ಶಾಲೆಗೆ ದುಡ್ಡು ಕೊಟ್ಟು ಕಳುಹಿಸಿ ಅಕ್ಷರ ಕಲಿಸುವ ಅಗತ್ಯವಿಲ್ಲ. ಸರ್ಕಾರ ಇರೋದು ಏಕೆ ಮತ್ತು ಯಾರಿಗೆ? ಎಂಬೆಲ್ಲ ಪ್ರಶ್ನೆಗಳನ್ನು ಕೇಳುತ್ತಾರೆ. ನಮ್ಮೂರಿನ ಹಾಡಿಯ ಮಕ್ಕಳು ಆ ಶಾಲೆಗೆ ಹೋಗಲಿಲ್ಲ ಅಂದರೆ ಶಾಲೆಯೇ ನಡೆಯಲ್ಲ ಮತ್ತು ಆಟೋ ಏನಾದರೂ ರಿಪೇರಿ ಆಗಿ, ಆಟೋ ಅಣ್ಣನಿಗೆ ಏನಾದರೂ ಅನಾರೋಗ್ಯವಾದರೂ ನಮ್ಮ ಮಕ್ಕಳು ಶಾಲೆಗೆ ಹೋಗುವ ಹಾಗಿಲ್ಲ. ಪರಿಸ್ಥಿತಿ ಹೀಗಿರುವಾಗ ಸರ್ಕಾರವೇ ನಮ್ಮ ಹಾಡಿಯಲ್ಲಿ ಶಾಲೆ ಮಾಡಬಹುದಲ್ಲಾ ಎಂದು ಹಾಡಿಯ ನಿವಾಸಿಗಳಾದ ಜೆ.ಕೆ. ರಾಜು, ಕೃಷ್ಣ, ಗಣೇಶ, ರಘು ಮೊದಲಾದವರು ಹೇಳುತ್ತಾರೆ.

ಸರಿಯಾದ ಶಿಕ್ಷಣ ಇನ್ನೂ ಈ ಹಾಡಿಯ ಮಕ್ಕಳಿಗೆ ದೊರಕದ ಕಾರಣ, ಪ್ರೌಢ ಶಿಕ್ಷಣಕ್ಕೆ ಮಕ್ಕಳು ತೆರಳದೇ ಚಿಕ್ಕ ವಯಸ್ಸಿಗೇನೇ ಗುದ್ದಲಿ, ಕತ್ತಿಗಳನ್ನು ಹಿಡಿದು ತೋಟಗಳಿಗೆ ಕೂಲಿ ಕೆಲಸಕ್ಕೆ ಪಾಲಕರ ಜೊತೆ ತೆರಳುತ್ತಿದ್ದಾರೆ. ಈ ಹಾಡಿಯಲ್ಲಿ ಪಿಯುಸಿ ಶಿಕ್ಷಣ ಪಡೆದ ಚಾಂದಿನಿ ಹಾಗೂ ಸತೀಶ್ ಬಿಟ್ಟರೆ, ಬೇರಾರು ಮುಂದಿನ ಶಿಕ್ಷಣ ಗಳಿಸಿದ ಮಕ್ಕಳೇ ಇಲ್ಲ. ಸರ್ಕಾರಿ ನೌಕರಿ ಗಳಿಸಿರುವ ಕುಟುಂಬಗಳು ಕೂಡ ಈ ಹಾಡಿಯಲ್ಲಿ ಇಲ್ಲ.

ಅಂದರೆ ಸ್ವಾತಂತ್ರ್ಯ ನಂತರದ ಅಷ್ಟೂ ವರ್ಷಗಳಿಂದ ಇಲ್ಲಿಯವರೆಗೂ ಸಮಾಜದಿಂದ ಶೋಷಿತರಾದ ಇನ್ನೂ ಮುಖ್ಯವಾಹಿನಿಗೆ ಬಾರದ ಈ ಅಮಾಯಕ ಕಾಡಿನ ಮಕ್ಕಳಿಗೆ ಶಿಕ್ಷಣವನ್ನು ಕೊಡಲು ನಮ್ಮನ್ನು ಆಳಿದ ಸರ್ಕಾರಗಳಿಗೆ ಸಾಧ್ಯವಾಗದಿರುವದು ವ್ಯವಸ್ಥೆಯ ದುರಂತವೇ ಸರಿ. ಗಿರಿಜನರ ಕಲ್ಯಾಣಕ್ಕೆಂದೇ ಇರುವ ಗಿರಿಜನ ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಮತ್ತು ಸರ್ವ ಶಿಕ್ಷಣ ವ್ಯವಸ್ಥೆಗೆ ಏನಾಗಿದೆ ಎಂಬ ಪ್ರಶ್ನೆಗೆ ಉತ್ತರ ನೀಡಬೇಕಿದೆ.

ಇನ್ನು ಇದೇ ಹೇರೂರು ಗಿರಿಜನ ಹಾಡಿಯಿಂದ ಪ್ರೌಢಶಿಕ್ಷಣ ಪಡೆಯಬೇಕೆಂದರೆ ಅತೀ ಸಮೀಪದ ಸರ್ಕಾರಿ ಪ್ರೌಢಶಾಲೆ ಎಂದರೆ ಕುಶಾಲನಗರ ಮಡಿಕೇರಿ ಹೆದ್ದಾರಿಯಲ್ಲಿ ಇರುವ ಬಸವನಹಳ್ಳಿ ಶಾಲೆ. ಈ ಶಾಲೆ ಹೇರೂರು ಗಿರಿಜನ ಹಾಡಿಗೆ ಐದು ಕಿ.ಮೀ. ದೂರದಲ್ಲಿದೆ. ಜೊತೆಗೆ ಆನೆಕಾಡು ಅರಣ್ಯದೊಳಗೆಯೇ ಬರಬೇಕು. ಇಲ್ಲಿ ರಾತ್ರಿಯಷ್ಟೇ ಹಗಲಿನಲ್ಲೂ ಕಾಡಾನೆ ಕಾಟ.

ಆಟೋದಲ್ಲಿ ಮಕ್ಕಳನ್ನು ಕಳುಹಿಸಲು ಹಣಕಾಸಿನ ಮುಗ್ಗಟ್ಟಿನ ಕಥೆ ಹೇಳುವ ಗಿರಿಜನರಿಗೆ ಶಿಕ್ಷಣದ ಮಹತ್ವವಾಗಲೀ, ಭವಿಷ್ಯದಲ್ಲಿ ಮಕ್ಕಳನ್ನು ಮಾದರಿಯಾಗಿ ಶಿಕ್ಷಣವಂತರಾಗಿಸುವ ಅರಿವಾಗಲೀ ಇಲ್ಲದ ಕಾರಣ ಹೆಣ್ಣು ಮಕ್ಕಳು ಕೂಡ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.

ಹೇರೂರಿನ ಗಣೇಶ ಎಂಬವರ ಮಗಳು ಸಂಪಿಗೆ ಹಾಗೂ ಕೃಷ್ಣ ಎಂಬವರ ಮಗಳು ಜ್ಯೋತಿ ಎಂಬ ಇಬ್ಬರು ಬಾಲಕಿಯರು ಎಂಟನೇ ತರಗತಿಗೆ ಬಸವನಹಳ್ಳಿ ಸರ್ಕಾರಿ ಶಾಲೆಗೆ ಸೇರಿದ್ದರು. ಆದರೆ ಹೋಗಿ ಬರಲು ಎದುರಾಗಿರುವ ಸಂಕಷ್ಟದಿಂದಾಗಿ ಈ ಇಬ್ಬರು ಬಾಲಕಿಯರು ಶಾಲೆಯನ್ನೇ ತೊರೆದಿದ್ದಾರೆ. ಈ ಮಕ್ಕಳನ್ನು ಹೇಗಾದರೂ ಮಾಡಿ ಬಂದು ಹೋಗುವಂತೆ ಮಾಡಲು ಬಸವನಹಳ್ಳಿ ಶಾಲೆಯ ಶಿಕ್ಷಕರು ಸೈಕಲ್ ಕೂಡ ಕೊಟ್ಟು ಸೈಕಲ್‍ನಲ್ಲಾದರೂ ಬಂದು ಕಲಿಯಿರಿ ಮಕ್ಕಳೇ ಎಂದರೆ, ಆ ಮಕ್ಕಳು ಕಾಡಾನೆಗಳ ಹಾವಳಿಗೆ ಹೆದರಿ ಬರುತ್ತಿಲ್ಲ. ಪೋಷಕರು ಕೂಡ ತಂದು ಬಿಡುತ್ತಿಲ್ಲ.

ಆಟೋದಲ್ಲಿ ಬರಲು ಹಣವನ್ನು ನೀಡುತ್ತಿಲ್ಲ. ಇಂತಹ ಸಮಸ್ಯೆಗಳು ಕಾಡಂಚಿನ ಎಲ್ಲಾ ಶಾಲೆಗಳಲ್ಲೂ ಇವೆ. ಇಂತಹ ಸಮಸ್ಯೆಗಳಿಗೆ ಶಾಲೆಯನ್ನು ಹೊಣೆ ಮಾಡಿ ಶಿಕ್ಷಕರನ್ನು ದೂಷಿಸುವಂತಿಲ್ಲ. ಗಿರಿಜನರ ಶಿಕ್ಷಣ, ಅರಿವು, ಆರೋಗ್ಯ ಹಾಗೂ ಸಮಗ್ರ ಅಭಿವೃದ್ಧಿಗೆಂದೇ ಸರ್ಕಾರ ನೇಮಿಸಿರುವ ಇಲಾಖೆಗಳು ಮಾಡಬೇಕಿದೆ ಅಷ್ಟೇ. - ಕೆ.ಎಸ್. ಮೂರ್ತಿ