ಮಡಿಕೇರಿ, ಡಿ. 14: ತಾ. 10 ರಂದು ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ‘ಸಹಕಾರ ಸಂಸ್ಥೆಗಳಲ್ಲಿ ಸ್ವಾತಂತ್ರ್ಯ ಮತ್ತು ಸ್ವಾಯತ್ತತೆ’ ಎಂಬ ವಿಷಯದ ಬಗ್ಗೆ ಪ್ರಬಂಧ ಸ್ಪರ್ಧೆಯನ್ನು ಮತ್ತು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ‘ಶಾಲಾ-ಕಾಲೇಜುಗಳಲ್ಲಿ “ಸಹಕಾರ” ಪಠ್ಯ ವಿಷಯವಾದಲ್ಲಿ ಮಾತ್ರವೇ ಯುವಜನರಲ್ಲಿ ಸಹಕಾರ ಪ್ರಜ್ಞೆಯನ್ನು ಮೂಡಿಸಬಹುದು’ ಎಂಬ ವಿಷಯದ ಬಗ್ಗೆ ಚರ್ಚಾ ಸ್ಪರ್ಧೆಯನ್ನು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದು, ಪ್ರಬಂಧ ಸ್ಪರ್ಧೆಯಲ್ಲಿ ಸಂತ ಜೋಸೆಫರ ಪ್ರೌಢಶಾಲೆ, ಮಡಿಕೇರಿ - ಪ್ರಥಮ ಹಾಗೂ ಚರ್ಚಾ ಸ್ಪರ್ಧೆಯಲ್ಲಿ ಕೂಡಿಗೆ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಥಮ ಸ್ಥಾನ ಗಳಿಸಿತು.
ನಂತರ ಏರ್ಪಡಿಸಲಾದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕೊಡಗು ಜಿಲ್ಲಾ ಸಹಕಾರ ಯೂನಿಯನ್ನಿನ ನಿರ್ದೇಶಕ ಎನ್.ಎ. ರವಿ ಬಸಪ್ಪ ಮಾತನಾಡಿ, ಸಹಕಾರ ಕ್ಷೇತ್ರವು ಅಗಾದವಾಗಿ ಬೆಳೆಯುತ್ತಿದ್ದು, ಇಂದು ಪ್ರತಿ ಹಳ್ಳಿ-ಹಳ್ಳಿಗೂ ಇದರ ಸೇವೆಯನ್ನು ತಲುಪಿಸಲಾಗಿದೆ. ಇಂದು ಸಹಕಾರ ಕ್ಷೇತ್ರದಲ್ಲಿ ಯುವಜನರ ಪಾಲ್ಗೊಳ್ಳುವಿಕೆ ವಿರಳವಾಗಿದ್ದು, ಯುವಜನರು ಈ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಅವಶ್ಯಕತೆ ಇದೆ. ಆ ಸಲುವಾಗಿ ಪ್ರಾಥಮಿಕ ಹಂತದಲ್ಲಿ ಶಾಲಾ ವಿದ್ಯಾರ್ಥಿಗಳಲ್ಲಿ ಸಹಕಾರ ಕ್ಷೇತ್ರದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಇಂತಹ ಸ್ಪರ್ಧೆಗಳನ್ನು ಏರ್ಪಡಿಸ ಲಾಗಿದೆ ಎಂದು ತಿಳಿಸುತ್ತಾ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿಯೂ ಸಹ ಸಹಕಾರ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.
ವೇದಿಕೆಯಲ್ಲಿ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಹೆಚ್.ಎನ್. ರಾಮಚಂದ್ರ, ಕನ್ನಂಡ ಸಂಪತ್, ಕೆ.ಎಂ. ತಮ್ಮಯ್ಯ, ಎನ್.ಎ. ರವಿ ಬಸಪ್ಪ, ಪಿ.ಸಿ. ಮನು ರಾಮಚಂದ್ರ, ಸಹಕಾರ ತರಬೇತಿ ಕೇಂದ್ರದ ನಿವೃತ್ತ ಪ್ರಾಂಶುಪಾಲ ಗುರುಮಲ್ಲಪ್ಪ ಹಾಗೂ ಕೆ.ಐ.ಸಿ.ಎಂ.ನ ಪ್ರಾಂಶುಪಾಲೆ ಡಾ. ಆರ್.ಎಸ್. ರೇಣುಕಾ ಉಪಸ್ಥಿತರಿದ್ದರು. ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬೆಳ್ಳಿ ಪದಕ ಮತ್ತು ಪ್ರಶಸ್ತಿ ಪತ್ರ ವಿತರಿಸಲಾಯಿತು.
ಪ್ರಬಂಧ ಸ್ಪರ್ಧೆ
ಪ್ರಥಮ- ಲಿಪಿಕ ಎ.ಆರ್. ಸಂತ ಜೋಸೆಫರ ಪ್ರೌಢಶಾಲೆ, ಮಡಿಕೇರಿ. ದ್ವಿತೀಯ- ಪ್ರಗತಿ ಕೆ.ಎಸ್., ಶಾಂತಿನಿಕೇತನ ಪ್ರೌಢಶಾಲೆ, ಕೊಡಗರಹಳ್ಳಿ. ತೃತೀಯ- ಆಯಿಷತ್ ಜುಬೇರಿಯಾ ಕಕ್ಕಬ್ಬೆ ಪ್ರೌಢಶಾಲೆ, ಕಕ್ಕಬ್ಬೆ. ಸಮಾಧಾನಕರ ಬಹುಮಾನ: ಹರ್ಷಿತಾ ಎನ್.ಎಂ., ಮಕ್ಕಂದೂರು ಸರ್ಕಾರಿ ಪ್ರೌಢಶಾಲೆ
ಚರ್ಚಾ ಸ್ಪರ್ಧೆ
ಪ್ರಥಮ - ಸವಿತಾ ಕೆ.ಎಸ್. ಕೂಡಿಗೆ ಸರ್ಕಾರಿ ಪದವಿಪೂರ್ವ ಕಾಲೇಜು. ದ್ವಿತೀಯ - ಫಾತಿಮಾ ತಸ್ಲೀಮ ಸಂತ ಮೈಕಲರ ಪದವಿಪೂರ್ವ ಕಾಲೇಜು, ಮಡಿಕೇರಿ. ತೃತೀಯ - ಪೂಜಾ ಎಂ.ಎಸ್. ನೆಲ್ಲಿಹುದಿಕೇರಿ ಸರ್ಕಾರಿ ಪದವಿಪೂರ್ವ ಕಾಲೇಜು
ಸಮಾಧಾನಕರ ಬಹುಮಾನ: ಡಾನ್ವಿ ದೇಚಮ್ಮ, ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಪ್ರೀ ಯೂನಿವರ್ಸಿಟಿ ಕಾಲೇಜು, ಹಳ್ಳಿಗಟ್ಟು