ಮಡಿಕೇರಿ, ಡಿ. 15: ಭಾರತೀಯ ಜನತಾ ಪಕ್ಷದ ಭದ್ರಕೋಟೆ ಎನಿಸಿರುವ ಕೊಡಗು ಜಿಲ್ಲೆಯಲ್ಲಿ ಈ ಪಕ್ಷದ ಆಂತರಿಕ ಚುನಾವಣೆ ನಡೆಯುತ್ತಿದ್ದು; ಈಗಾಗಲೇ ಬೂತ್ ಮಟ್ಟದ ಪದಾಧಿಕಾರಿಗಳು ಹಾಗೂ ಮಂಡಳ ಅಧ್ಯಕ್ಷ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿದೆ. ಪಕ್ಷದ ಜಿಲ್ಲೆಯ ನಿಯಮಾವಳಿಯಂತೆ; ಈಗಾಗಲೇ ಸೋಮವಾರಪೇಟೆ ಮಂಡಳ, ಮಡಿಕೇರಿ ಗ್ರಾಮಾಂತರ, ವೀರಾಜಪೇಟೆ ಮಂಡಳ ಹಾಗೂ ಮಡಿಕೇರಿ ನಗರ ಮಂಡಳ ಅಧ್ಯಕ್ಷರುಗಳ ನೇಮಕ ನಡೆದಿದೆ.
ಸೋಮವಾರಪೇಟೆಯಿಂದ ಮನುರೈ, ಮಡಿಕೇರಿ ಗ್ರಾಮಾಂತರದಿಂದ ಕಾಂಗೀರ ಸತೀಶ್, ವೀರಾಜಪೇಟೆ ಮಂಡಳದಿಂದ ನೆಲ್ಲೀರ ಚಲನ್, ಮಡಿಕೇರಿ ನಗರ ಮಂಡಳದ ಅಧ್ಯಕ್ಷರಾಗಿ ಮನು ಮಂಜುನಾಥ್ ಆಯ್ಕೆಗೊಂಡಿದ್ದಾರೆ. ಇದೀಗ ಬಾಕಿ ಉಳಿದಿರುವದು ಜಿಲ್ಲಾ ಅಧ್ಯಕ್ಷ ಸ್ಥಾನದ ಹುದ್ದೆಯಾಗಿದ್ದು, ಡಿಸೆಂಬರ್ ಅಂತ್ಯದೊಳಗೆ ಈ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎನ್ನಲಾಗಿದೆ.ಜಿಲ್ಲಾಧ್ಯಕ್ಷ ಸ್ಥಾನಾಕಾಂಕ್ಷಿಗಳು ಬಿಜೆಪಿ ಅಧ್ಯಕ್ಷಗಾದಿಗಾಗಿ ಪ್ರಸ್ತುತ ಹಲವರು ಆಕಾಂಕ್ಷಿಗಳಾಗಿದ್ದು; ತಮ್ಮ ಪ್ರಯತ್ನದಲ್ಲಿರುವದು ತಿಳಿದು ಬಂದಿದೆ. ಈ ಆಯ್ಕೆಯ ಕಸರತ್ತಿಗಾಗಿ ಈಗಾಗಲೇ ರಾಜ್ಯದಿಂದ ನಿಯೋಜನೆಗೊಂಡಿರುವ ವೀಕ್ಷಕರು ಮಾಹಿತಿ ಕಲೆ ಹಾಕುತ್ತಿದ್ದಾರೆಂದು ತಿಳಿದು ಬಂದಿದೆ. ಚುನಾವಣಾ ಉಸ್ತುವಾರಿಯಾಗಿ ಎಂಎಲ್‍ಸಿ ಗಣೇಶ್ ಕಾರ್ಣಿಕ್ ಅವರಿದ್ದರೆ; ರಾಜ್ಯ ವೀಕ್ಷಕರಾಗಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಪ್ರಮುಖರಾದ ಉದಯಕುಮಾರ್ ಶೆಟ್ಟಿ ಅವರು ಕಾರ್ಯವೈಖರಿ ಗಮನಿಸುತ್ತಿದ್ದಾರೆ.
ಜಿಲ್ಲಾಧ್ಯಕ್ಷ ಸ್ಥಾನಕ್ಕಾಗಿ ಹಾಲಿ ಅಧ್ಯಕ್ಷರಾಗಿರುವ ಬಿ.ಬಿ. ಭಾರತೀಶ್ ಅವರಿಗೂ ಅವಕಾಶವಿದ್ದು; ಅವರ ಹೆಸರೂ ಪಟ್ಟಿಯಲ್ಲಿದೆ. ಏಕೆಂದರೆ ಪಕ್ಷದ ನಿಯಮದಂತೆ ಭಾರತೀಶ್ ಅವರು ಅಧ್ಯಕ್ಷರಾಗಿ ಪೂರ್ಣ ಅವಧಿ ಮುಕ್ತಾಯ ಗೊಂಡಿಲ್ಲ. ಈ ಹಿಂದೆ ಮನು ಮುತ್ತಪ್ಪ ಅವರು ಬದಲಾವಣೆಗೊಂಡ ಬಳಿಕ ಭಾರತೀಶ್ ಅಧ್ಯಕ್ಷರಾಗಿ ನಿಯುಕ್ತಿಗೊಂಡಿದ್ದರು.
ಇತರರು: ಭಾರತೀಶ್ ಅವರೊಂದಿಗೆ ಈ ಬಾರಿ ಅಧ್ಯಕ್ಷಗಾದಿಗಾಗಿ ರಾಬಿನ್ ದೇವಯ್ಯ, ರವಿಕುಶಾಲಪ್ಪ, ರವಿಕಾಳಪ್ಪ, ರವಿ ಬಸಪ್ಪ, ನಾಗೇಶ್ ಕುಂದಲ್ಪಾಡಿ, ಸುಬ್ರಮಣಿ ಉಪಾಧ್ಯಾಯ, ಕುಂಞಂಗಡ ಅರುಣ್ ಭೀಮಯ್ಯ ಅವರುಗಳ ಹೆಸರು ಕೇಳಿ ಬಂದಿದೆ. ಈ ಬಗ್ಗೆ ರಾಜ್ಯದಿಂದ ನಿಯೋಜಿತ ಪ್ರಮುಖರು ಗಮನ ಹರಿಸಲಿದ್ದು; ರಾಜ್ಯಕ್ಕೆ ವರದಿ ಸಲ್ಲಿಸುವ ಸಾಧ್ಯತೆ ಹಾಗೂ ರಾಜ್ಯಮಟ್ಟದಿಂದಲೇ ಜಿಲ್ಲಾ ಅಧ್ಯಕ್ಷರ ಘೋಷಣೆಯಾಗುವ ನಿರೀಕ್ಷೆ ಇದೆ ಎನ್ನಲಾಗಿದೆ.
(ಮೊದಲ ಪುಟದಿಂದ)
ವೀರಾಜಪೇಟೆ ಅಧ್ಯಕ್ಷರ ಆಯ್ಕೆಯ ಹಿಂದೆ
ವೀರಾಜಪೇಟೆ ಅಧ್ಯಕ್ಷರ ಆಯ್ಕೆ ನಿನ್ನೆ ತಾನೆ ಮುಕ್ತಾಯಗೊಂಡಿದ್ದು ಈ ಸಂದರ್ಭ ಪಕ್ಷದ ಪ್ರಮುಖರ ನಡುವೆ ಕೆಲವೊಂದು ನಾಟಕೀಯ ಬೆಳವಣಿಗೆಗಳು ನಡೆದಿರುವ ಕುರಿತು ಮಾತು ಕೇಳಿ ಬಂದಿದೆ.
ಈ ಸ್ಥಾನಕ್ಕಾಗಿ ಕೆಲವರ ಹೆಸರು ಚಲಾವಣೆಯಲ್ಲಿದ್ದು; ನಿನ್ನೆ ಗೋಣಿಕೊಪ್ಪಲುವಿನಲ್ಲಿ ನಡೆದ ಸಭೆಗೂ ಮುನ್ನ ವೀರಾಜಪೇಟೆ ಪಕ್ಷದ ಪ್ರಮುಖರು ಹಾಗೂ ಕೋರ್ ಕಮಿಟಿಯ ಸಭೆ ನಡೆದಿದೆ. ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಸೇರಿದಂತೆ; ಗಣೇಶ್ ಕಾರ್ಣಿಕ್, ಉದಯಕುಮಾರ್ ಶೆಟ್ಟಿ, ರವಿಕಾಳಪ್ಪ, ಮನು ಮುತ್ತಪ್ಪ, ಭಾರತೀಶ್, ಸುಜಾ ಕುಶಾಲಪ್ಪ, ಅರುಣ್ ಭೀಮಯ್ಯ ಮತ್ತಿತರ ಪ್ರಮುಖರನ್ನು ಒಳಗೊಂಡಿದ್ದ ಸಭೆಯಲ್ಲಿ ಸುಧೀರ್ಘ ಚರ್ಚೆ ಬಳಿಕ ಅಧ್ಯಕ್ಷ ಸ್ಥಾನಕ್ಕೆ ನೆಲ್ಲೀರ ಚಲನ್ ಅವರ ಹೆಸರು ಅಂತಿಮವಾಯಿತೆನ್ನಲಾಗಿದೆ.
ಆದರೆ ಈ ಸಂದರ್ಭ ಇದಕ್ಕೆ ಪ್ರಮುಖರಾದ ಶಶಿ ಸುಬ್ರಮಣಿ, ರಘು ನಾಣಯ್ಯ ಸೇರಿದಂತೆ ಒಂದಿಬ್ಬರು ಆಕ್ಷೇಪ ವ್ಯಕ್ತಪಡಿಸಿದ್ದಾಗಿಯೂ ಹೇಳಲಾಗಿದೆ. ವೀರಾಜಪೇಟೆ ಸಭೆಯ ಬಳಿಕ ಗೋಣಿಕೊಪ್ಪಲುವಿನಲ್ಲಿ ನೂತನ ಅಧ್ಯಕ್ಷರ ಘೋಷಣೆಗಾಗಿ ಬೂತ್ ಪ್ರಮುಖರು ಹಾಗೂ ಪ್ರಮುಖ ಕಾರ್ಯಕರ್ತರ ಸಭೆ ನಿಗದಿಗೊಂಡಿತ್ತು. ಆದರೆ ಈ ಸಭೆಗೆ ಶಾಸಕರಾದÀ ಕೆ.ಜಿ. ಬೋಪಯ್ಯ, ರಘುನಾಣಯ್ಯ, ಶಶಿಸುಬ್ರಮಣಿ, ಗಿರೀಶ್ ಗಣಪತಿ ಸೇರಿದಂತೆ ಅಧ್ಯಕ್ಷ ಸ್ಥಾನದ ಮತ್ತೋರ್ವ ಆಕಾಂಕ್ಷಿಯಾಗಿದ್ದ ಸಿ.ಕೆ. ಬೋಪಣ್ಣ ಅವರು ಹಾಜರಿರಲಿಲ್ಲವೆಂದು ಪಕ್ಷದ ಮೂಲಗಳಿಂದ ತಿಳಿದು ಬಂದಿದೆ. ಈ ಘಟನೆ ಬಳಿಕ ಸಭೆ ಮುಂದುವರಿದಿದ್ದು; ಅಲ್ಲಿ ಚಲನ್ ಆಯ್ಕೆಯನ್ನು ಪ್ರಕಟಿಸಲಾಗಿದೆ.
ವೀರಾಜಪೇಟೆ ಮಂಡಳ ಅಧ್ಯಕ್ಷರ ನೇಮಕದ ಸಂದರ್ಭ ಜರುಗಿದ ಈ ಬೆಳವಣಿಗೆಯಿಂದ ಇದೀಗ ಜಿಲ್ಲಾ ಅಧ್ಯಕ್ಷ ಸ್ಥಾನದ ಆಯ್ಕೆಯ ಬಗ್ಗೆ ಕುತೂಹಲ ಹೆಚ್ಚಾಗಿದೆ. ಈಗಾಗಲೇ ಹಲವು ಮಂದಿ ಆಕಾಂಕ್ಷಿಗಳಿರುವದರಿಂದ ಪಕ್ಷದ ಉನ್ನತ ನಾಯಕರು ಯಾರಿಗೆ ಮಣೆ ಹಾಕಲಿದ್ದಾರೆ ಎಂಬದನ್ನು ಕಾದುನೋಡಬೇಕಿದೆ.