ಮಡಿಕೇರಿ, ಡಿ. 13: ಜಿಲ್ಲಾಡಳಿತದ ವತಿಯಿಂದ ಪ್ರವಾಸೋದ್ಯಮ ಇಲಾಖೆ ಮೂಲಕ ರಾಜಾಸೀಟ್ ಬಳಿಯಿಂದ ರೇಸ್ ಕೋರ್ಸ್ ರಸ್ತೆ ಬದಿ ಬರುವ ಜಾಗದಲ್ಲಿ ‘ಕೂರ್ಗ್ ವಿಲೇಜ್’ ಯೋಜನೆ ಸಂಬಂಧ ಜಿಲ್ಲಾಡಳಿತಕ್ಕೆ ಸೂಕ್ತ ದಾಖಲೆಗಳನ್ನು ಸಲ್ಲಿಸುವಂತೆ ಇಲ್ಲಿನ ನ್ಯಾಯಾಲಯ ಸೂಚನೆ ನೀಡಿದೆ.ರಾಜಾಸೀಟ್ನ ಕೆಳ ಭಾಗದಲ್ಲಿರುವ ಜಾಗದಲ್ಲಿ ರೂ. 98 ಲಕ್ಷ ವೆಚ್ಚದಲ್ಲಿ ‘ಕೂರ್ಗ್ ವಿಲೇಜ್’ ಯೋಜನೆಯನ್ನು ಪ್ರವಾಸೋದ್ಯಮ ಇಲಾಖೆ ಮೂಲಕ ಯೋಜನೆ ಯೊಂದು ರೂಪುಗೊಳ್ಳುತ್ತಿದೆ. ಆದರೆ ಈ ಯೋಜನೆಯಿಂದ ಪರಿಸರಕ್ಕೆ ಧಕ್ಕೆಯಾಗಲಿದೆ. ಅಲ್ಲದೆ ಈ ಯೋಜನೆ ರಾಷ್ಟ್ರೀಯ ಸ್ಮಾರಕದ (ರಾಜಾಸೀಟು) ಅತಿ ಸನಿಹದಲ್ಲಿ ನಿರ್ಮಾಣವಾಗುತ್ತಿದೆ. ಇದಕ್ಕೆ ಅವಕಾಶ
(ಮೊದಲ ಪುಟದಿಂದ) ನೀಡಬಾರದೆಂದು ಮಡಿಕೇರಿ ಪುರಸಭೆ ಮಾಜಿ ಅಧ್ಯಕ್ಷ ಕೆ.ಜಿ. ಹರೀಶ್ ಅವರು ತಡೆಯಾಜ್ಞೆ ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಇಂದು ವಿಚಾರಣೆ ನಡೆದಿದ್ದು, ಪ್ರಿನ್ಸಿಪಲ್ ಮುನ್ಸಿಫ್ ಸಿವಿಲ್ ಜಡ್ಜ್ ಕಿರಿಯ ವಿಭಾಗ ನ್ಯಾಯಾಲಯದ ನ್ಯಾಯಾಧೀಶರಾದ ಮನು ಅವರು ಈ ಸಂಬಂಧ ವಿಚಾರಣೆಯನ್ನು ತಾ. 20ಕ್ಕೆ ಮುಂದೂಡಿದ್ದು, ಯೋಜನೆ ಬಗ್ಗೆ ಸೂಕ್ತ ದಾಖಲೆ ಒದಗಿಸುವಂತೆ ಸರಕಾರಿ ವಕೀಲರಿಗೆ ಸೂಚನೆ ನೀಡಿದ್ದಾರೆ.
ಪ್ರಕರಣದಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಯೋಜನಾಧಿಕಾರಿ, ಪ್ರವಾಸೋದ್ಯಮ ಇಲಾಖಾಧಿಕಾರಿಗಳನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದ್ದು, ಇವರ ಪರವಾಗಿ ಸರಕಾರಿ ಅಭಿಯೋಜಕ ಎನ್. ಶ್ರೀಧರನ್ ನಾಯರ್ ತಾ. 20 ರಂದು ದಾಖಲೆಗಳನ್ನು ಸಲ್ಲಿಸಲಿದ್ದಾರೆ. ಅರ್ಜಿದಾರ ಕೆ.ಜಿ. ಹರೀಶ್ ಪರ ವಕೀಲ ಜಿ.ಆರ್. ರವಿಶಂಕರ್ ವಕಾಲತ್ತು ವಹಿಸಿದ್ದಾರೆ.