ಗೋಣಿಕೊಪ್ಪ ವರದಿ, ಡಿ. 13: ನಬಾರ್ಡ್ ವತಿಯಿಂದ ರೈತರಿಗೆ ದೊರೆಯುವ ಸವಲತ್ತುಗಳನ್ನು ಬಳಸಿಕೊಂಡು ಸ್ವಾವಲಂಭಿ ಜೀವನ ಸಾಗಿಸಲು ರೈತರು ಉತ್ಸಾಹ ತೋರಬೇಕು ಎಂದು ನಬಾರ್ಡ್ ನಿವೃತ್ತ ಮಹಾ ಪ್ರಬಂಧಕ ಎಂ. ಸಿ. ನಾಣಯ್ಯ ಸಲಹೆ ನೀಡಿದರು.
ನಬಾರ್ಡ್, ಕೊಡಗು ಜಿಲ್ಲಾ ಸಹಕಾರ ಬ್ಯಾಂಕ್ ನಿಯಮಿತ ಸಹಯೋಗದಲ್ಲಿ ತಿತಿಮತಿ ಕೃಷಿ ಪತ್ತಿನ ಸಹಕಾರ ಸಂಘ ಸಭಾಂಗಣದಲ್ಲಿ ಆಯೋಜಿಸಿದ್ದ ಸ್ವಸಹಾಯ ಸಂಘಗಳ ಗ್ರಾಮೀಣ ಮಟ್ಟದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಸಾಕಷ್ಟು ಯೋಜನೆಗಳು ರೈತರಿಗಾಗಿ ಲಭ್ಯವಿದ್ದರೂ ಅದರ ಸದ್ಭಳಕೆಗೆ ಕೃಷಿಕರು ಮುಂದಾಗುತ್ತಿಲ್ಲ. ಸರ್ಕಾರದ ಯೋಜನೆಗಳನ್ನು ತಮ್ಮ ಕುಟುಂಬ, ಸಂಘದ ಸದಸ್ಯರುಗಳು ಪ್ರಯೋಜನ ಪಡೆದುಕೊಳ್ಳಬೇಕು. ಸ್ವಸಹಾಯ ಸಂಘಗಳಿಗೆ ದೊರೆಯುವ ಹೈನುಗಾರಿಕೆ, ಡಿಸಿಸಿ ಬ್ಯಾಂಕ್ನಿಂದ ಸಿಗುವ ಆರ್ಥಿಕ ಸೌಲಭ್ಯ ಪಡೆದುಕೊಳ್ಳುವಂತೆ ತಿಳಿಸಿದರು. ಸಾಮಾಜಿಕ ಭದ್ರತೆಗಾಗಿ ವಿಮೆ ಸೌಲಭ್ಯ ಪಡೆದುಕೊಳ್ಳುವಂತೆ, ಕೇಂದ್ರದ ಸಣ್ಣ ಠೇವಣಿ ಕಂತಿನ ವಿಮಾ ಯೋಜನೆಗೆ ಸೇರಿಕೊಂಡು ಬದುಕಿನಲ್ಲಿ ಭದ್ರತೆಗೆ ಕೂಡ ಕಾಳಜಿ ವಹಿಸಬೇಕು ಎಂದರು. ಈ ಸಂದರ್ಭ ತಿತಿಮತಿ ಕೃಷಿ ಪತ್ತಿನ ಸಹಕಾರ ಸಂಘ ಅಧ್ಯಕ್ಷ ಚೆಪ್ಪುಡೀರ ರಾಮಕೃಷ್ಣ, ಡಿಸಿಸಿ ಬ್ಯಾಂಕ್ ಉಪಪ್ರಬಂಧಕ ಬೋಜಮ್ಮ, ಗೋಣಿಕೊಪ್ಪ ಶಾಖೆ ವ್ಯವಸ್ಥಾಪಕ ದೇವಯ್ಯ, ತಿತಿಮತಿ ಗ್ರಾ.ಪಂ. ಅಧ್ಯಕ್ಷ ಶಿವಕುಮಾರ್ ಇದ್ದರು.