ಗೋಣಿಕೊಪ್ಪಲು. ಡಿ. 13: ಗಬ್ಬದ ಹಸುವನ್ನು ಭತ್ತದ ಗದ್ದೆ ಬಳಿ ಮೇಯಲು ಕಟ್ಟಿ ಹಾಕಿದ್ದ ಸಂದರ್ಭ ಹುಲಿಯೊಂದು ದಾಳಿ ನಡೆಸಿ ಕೊಂದು ಹಾಕಿದ ಘಟನೆ ಶ್ರೀ ಮಂಗಲ ಹೋಬಳಿ ಟಿ.ಶೆಟ್ಟಿಗೇರಿ ಪಂಚಾಯಿತಿ ವ್ಯಾಪ್ತಿಯ ಹರಿಹರ ಗ್ರಾಮದಲ್ಲಿ ನಡೆದಿದೆ.ಗ್ರಾಮದ ರೈತರಾದ ಬಾಚೀರ ಸುರಕ್ಷಾ, ಸುಗಂಧ ಅವರಿಗೆ ಸೇರಿದ ಗಬ್ಬದ ಹಸುವನ್ನು ಹುಲಿ ಕೊಂದು ಹಾಕಿದ್ದು ಗದ್ದೆಯಿಂದ ಅನತಿ ದೂರದವರೆಗೆ ಎಳೆದುಕೊಂಡು ಹೋಗಿ ತಿಂದು ಹಾಕಿದೆ. ಸಂಜೆಯ ವೇಳೆ ಹಸುವನ್ನು ಕೊಟ್ಟಿಗೆಗೆ ಕರೆತರಲು ಕಾರ್ಮಿಕ ಗದ್ದೆ ಬಳಿ ತೆರಳಿದ ಸಂದರ್ಭದಲ್ಲಿ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.ಸುದ್ದಿ ತಿಳಿದ ಮನೆಯ ಯಜಮಾನ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದರು. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು, ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇತ್ತೀಚಿನ ದಿನಗಳಲ್ಲಿ ನಿರಂತರವಾಗಿ ಹುಲಿ ದಾಳಿಯಿಂದ ಜಾನುವಾರುಗಳು ಸಾಯುತ್ತಿದ್ದು ರೈತನಿಗೆ ದಿಕ್ಕೆ ತೋಚದಂತಾಗಿದೆ. ಇನ್ನೂ ಕೆಲವು ದಿನಗಳಲ್ಲಿ ಹಸು ಕರುವಿಗೆ ಜನ್ಮ ನೀಡುವ ಸಂದರ್ಭವಿತ್ತು ಎಂದು ಹಸುವಿನ ಮಾಲೀಕ ಮಾಹಿತಿ ನೀಡಿದರು. ರೈತ ಸಂಘ ಪ್ರತಿಭಟನೆ ನಡೆಸಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರೂ ಯಾವುದೇ ಪ್ರಯೋಜನ ಕಂಡುಬರುತ್ತಿಲ್ಲ.