ಕುಶಾಲನಗರ, ಡಿ. 13: ಬೈಕ್ ಮತ್ತು ಪಿಕ್ ಅಪ್ ವಾಹನಗಳ ನಡುವೆ ಉಂಟಾದ ಅಪಘಾತದಲ್ಲಿ ಬೈಕ್ನ ಹಿಂಬದಿ ಸವಾರ ಸ್ಥಳದಲ್ಲೇ ಮೃತಪಟ್ಟು ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ಬೈಲುಕೊಪ್ಪ ಬಳಿ ನಡೆದಿದೆ. ಪಿರಿಯಾಪಟ್ಟಣ ನಿವಾಸಿ ದಿ. ಜಾರ್ಜ್ ಅವರ ಪುತ್ರ ಲೆವಿನ್ಸನ್(20) ಮೃತ ದುರ್ದೈವಿ.
ಕುಶಾಲನಗರದ ಕಲ್ಪತರು ಐಟಿಐ ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಮೃತ ಯುವಕ ಪಿರಿಯಾಪಟ್ಟಣದ ತನ್ನ ಗೆಳೆಯ ಸುಮಿತ್ ಎಂಬಾತನ ಪಲ್ಸರ್ ಬೈಕಿನ ಹಿಂಬದಿಯಲ್ಲಿ ಕುಳಿತು ಪಿರಿಯಾಪಟ್ಟಣದತ್ತ ತೆರಳುವಾಗ ಬೈಲುಕೊಪ್ಪ ಸಮೀಪ ಎದುರಿನಿಂದ ಬಂದ ಎಳನೀರು ತುಂಬಿದ್ದ ಪಿಕ್ ಅಪ್ ವಾಹನ ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ನೆಲಕ್ಕುರುಳಿದ ಲೆವಿನ್ಸ್ನ ಮೇಲೆ ವಾಹನ ಹರಿದಿದ್ದು; ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೈಕ್ ಓಡಿಸುತ್ತಿದ್ದ ಗೆಳೆಯ ಸುಮಿತ್ ಕಾಲು ಮುರಿತಕ್ಕೊಳಗಾಗಿದ್ದು ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಘಟನೆ ನಡೆಯುತ್ತಿದ್ದಂತೆ ವಾಹನ ಚಾಲಕ ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಬೈಲುಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.