ಮಡಿಕೇರಿ, ಡಿ.13: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕೊಡಗಿನ ಗಡಿಭಾಗ ನಿಡ್ತ ಗ್ರಾಮದಲ್ಲಿ ಹಮ್ಮಿಕೊಂಡಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಮುಂಬರುವ ಜ.31 ಹಾಗೂ ಫೆ.1ರಂದು ಎರಡು ದಿನಗಳ ಕಾಲ ನಡೆಸಲು ತೀರ್ಮಾನಿಸಲಾಗಿದೆ.
ಕಸಾಪ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಜಿಲ್ಲಾ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಸಭೆಯಲ್ಲಿ ಸಮ್ಮೇಳನದ ರೂಪು ರೇಷೆಗಳ ಬಗ್ಗೆ ಚರ್ಚಿಸಲಾಯಿತು. ಮೆರವಣಿಗೆ, ಕವಿಗೋಷ್ಠಿ, ವಿಚಾರ ಗೋಷ್ಠಿ, ಗೀತಗಾಯನ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಹಾಗೂ ಸಾರ್ವಜನಿಕರಿಗೆ ಗ್ರಾಮೀಣ ಜನಪದ ಆಟೋಟ ಸ್ಪರ್ಧೆ ಏರ್ಪಡಿಸುವ ಕುರಿತು ತೀರ್ಮಾನಿಸಲಾಯಿತು.
ಕುವೆಂಪು ರಸಪ್ರಶ್ನೆ
ರಾಷ್ಟ್ರಕವಿ ಕುವೆಂಪು ಅವರ ಜನ್ಮ ಶತಮಾನೋತ್ಸವ ಅಂಗವಾಗಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ಗಳಿಗಾಗಿ ಕುವೆಂಪು ಅವರ ಬದುಕು ಬರಹ ಕುರಿತಾಗಿ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಲು ತೀರ್ಮಾನಿಸಲಾಯಿತು. ಪ್ರತಿ ಕಾಲೇಜಿನಿಂದ ಇಬ್ಬರು ವಿದ್ಯಾರ್ಥಿಗಳಿಗೆ ಭಾಗವಹಿಸಲು ಅವಕಾಶವಿದ್ದು, ಈ ನಿಟ್ಟಿನಲ್ಲಿ ಪ.ಪೂ.ಶಿಕ್ಷಣ ಇಲಾಖೆ ಉಪನಿರ್ದೇಶಕರು ಹಾಗೂ ಕಾಲೇಜಿನ ಪ್ರಾಂಶುಪಾಲರನ್ನು ಸಂಪರ್ಕಿಸುವ ಬಗ್ಗೆ ನಿರ್ಧರಿಸಲಾಯಿತು. ತಾ.21ರಂದು ಮಡಿಕೇರಿಯ ಅರಸು ಭವನದಲ್ಲಿ ಕಾರ್ಯಕ್ರಮ ಏರ್ಪಡಿಸಿ, ತಾ.29ರಂದು ನಡೆಯುವ ಕುವೆಂಪು ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ವಿತರಿಸುವಂತೆ ತೀರ್ಮಾನಿಸ ಲಾಯಿತು. ಸಭೆಯಲ್ಲಿ ಗೌರವ ಕಾರ್ಯದರ್ಶಿಗಳಾದ ಕೆ.ಎಸ್. ರಮೇಶ್, ಎನ್.ಎ. ಅಶ್ವತ್ಥ್, ಮಡಿಕೇರಿ ತಾಲೂಕು ಅಧ್ಯಕ್ಷ ಕುಡೆಕಲ್ ಸಂತೋಷ್, ಜಿಲ್ಲಾ ಸಮಿತಿ ನಿರ್ದೇಶಕರುಗಳಾದ ಪ್ರಸನ್ನ, ಪಿಲಿಫ್ ವಾಸ್, ಲೋಕನಾಥ್ ಅಮೆಚೂರ್, ಕಚೇರಿ ಸಿಬ್ಬಂದಿ ಶ್ವೇತಾ ಇದ್ದರು.