ಮಡಿಕೇರಿ, ಡಿ.13: ಅರಣ್ಯ ಇಲಾಖೆ ವತಿಯಿಂದ ಕೊಡಗು-ಮೈಸೂರು ವೃತ್ತ ಮಟ್ಟದ ಅರಣ್ಯ ಇಲಾಖೆ ನೌಕರರ ಕ್ರೀಡಾಕೂಟಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್ ಅವರು ಚಾಲನೆ ನೀಡಿದರು.

ನಗರದ ಜನರಲ್ ಕೆ.ಎಸ್. ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿ ಕೊಳ್ಳುವುದರಿಂದ ಸ್ಪರ್ಧಾ ಮನೋಭಾವ ಹೆಚ್ಚಾಗುತ್ತದೆ. ಇದರಿಂದ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಲಿದೆ. ಜೊತೆಗೆ ಎಲ್ಲರೂ ಒಂದೆಡೆ ಸೇರಲು ಸಹಕಾರಿಯಾಗಿದೆ ಎಂದರು.

ಮೈಸೂರು ಮತ್ತು ಕೊಡಗು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ.ಹಿರಾಲಾಲ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಮರಿಯಾ ಕ್ರಿಸ್ತ ರಾಜ, ಎಸ್.ಪ್ರಭಾಕರನ್, ಶಿಂಧೆ ನಿಲೇಶ್ ಡಿಯೊಬ್ ಇತರರು ಇದ್ದರು. ಓಟ, ಚೆಸ್, ಕೇರಂ, ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್, ಷಾಟ್‍ಪುಟ್, ಜಾವಲಿಂಗ್, ಲಾಂಗ್‍ಜಂಪ್, ಐಜಂಪ್, ಈಜು ಹೀಗೆ ನಾನಾ ಕ್ರೀಡಾ ಚಟುವಟಿಕೆಗಳು ಜರುಗಿದವು.

ಸಮಾರೋಪ ಸಮಾರಂಭ

ಕ್ರೀಡಾಕೂಟದ ಸಮಾರೋಪ ಸಮಾರಂಭವು ತಾ.14 ರಂದು (ಇಂದು) ಸಂಜೆ 4.30 ಗಂಟೆಗೆ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ.

ಏರ್ ಮಾರ್ಷಲ್ (ನಿವೃತ್ತ) ನಂದ ಕಾರ್ಯಪ್ಪ, ಮೈಸೂರು ವೃತ್ತ ಹಾಗೂ ಕೊಡಗು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ.ಹಿರಾಲಾಲ್ ಇತರರು ಪಾಲ್ಗೊಳ್ಳಲಿದ್ದಾರೆ.