ಕೂಡಿಗೆ, ಡಿ. 13: ಶಿರಂಗಾಲ ಗ್ರಾಮದಲ್ಲಿ ಅಕ್ರಮವಾಗಿ ಗ್ರಾನೈಟ್ಗೆ ಬಳಸುವ ಕಲ್ಲು ಸಾಗಾಟ ಮಾಡುತ್ತಿದ್ದ ಸ್ಥಳಕ್ಕೆ ಧಾಳಿ ನಡೆಸಿದ ಗಣಿ ಮತ್ತು ಭೂವಿಜ್ಞಾನ ಇಲಾಖಾಧಿಕಾರಿಗಳು ಕಲ್ಲು ಕೊರೆಯುತ್ತಿದ್ದ ಯಂತ್ರವನ್ನು ವಶಪಡಿಸಿಕೊಂಡಿದ್ದಾರೆ.ಶಿರಂಗಾಲ ಗ್ರಾಮದ ಮಹೇಶ್ ಎಂಬವರು ತಮ್ಮ ಜಾಗವನ್ನು ಬೆಂಗಳೂರಿನ ವ್ಯಕ್ತಿಯೋರ್ವರಿಗೆ ಕಲ್ಲು ಗಣಿಗಾರಿಕೆಗೆ ಭೋಗ್ಯಕ್ಕೆ ನೀಡಿದ್ದರು. ಭೋಗ್ಯಕ್ಕೆ ಪಡೆದ ವ್ಯಕ್ತಿ ಕಲ್ಲುಗಳ ಬದಲಿಗೆ ಬೆಲೆಬಾಳುವ ಗ್ರಾನೈಟ್ಗೆ ಬಳಕೆಯಾಗುವ ಕಲ್ಲುಗಳನ್ನು ಸಾಗಾಟ ಮಾಡುತ್ತಿರುವ ಬಗ್ಗೆ ಅರಿತ ಗ್ರಾಮಸ್ಥರು ಈ ಬಗ್ಗೆ ಗಣಿ ಮತ್ತು ಭೂವಿಜ್ಞಾನ ಇಲಾಖಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ಇಂದು ಸಂಜೆ ಇಲಾಖಾಧಿಕಾರಿ ರೋಜಾ, ತಾಲೂಕು ಉಪತಹಶೀಲ್ದಾರ್ ಚಿಣ್ಣಪ್ಪ, ಗ್ರಾ.ಪಂ. ಅಧ್ಯಕ್ಷ ಮಂಜುನಾಥ್, ಮಾಜಿ ಅಧ್ಯಕ್ಷರುಗಳಾದ ರಮೇಶ್, ರಘು ಹಾಗೂ ಅಭಿವೃದ್ಧಿ ಅಧಿಕಾರಿ ಹರೀಶ್ ಅವರುಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭ ಅಕ್ರಮವಾಗಿ ಗ್ರಾನೈಟ್ ಕಲ್ಲು ಕೊರೆದು ಸಾಗಿಸುತ್ತಿದ್ದುದು ಕಂಡು ಬಂದಿದೆ. ಸ್ಥಳದಲ್ಲಿದ್ದ ಹಿಟಾಚಿ, ಯಂತ್ರ ಸಹಿತ ಟ್ರ್ಯಾಕ್ಟರನ್ನು ವಶಪಡಿಸಿಕೊಂಡು ಮೊಕದ್ದಮೆ ದಾಖಲಿಸಿ ಯಂತ್ರವನ್ನು ಕುಶಾಲನಗರ ಗ್ರಾಮಾಂತರ ಠಾಣಾ ಪೊಲೀಸ್ ವಶಕ್ಕೆ ಒಪ್ಪಿಸಿದ್ದಾರೆ.ಸಂಜೆಗತ್ತಲಾದ ಬಳಿಕ ಶಿರಂಗಾಲ - ಹಾಸನ ಮಾರ್ಗವಾಗಿ ಬೆಂಗಳೂರಿಗೆ ಕಲ್ಲುಗಳನ್ನು ಸಾಗಾಟ ಮಾಡುತ್ತಿರುವದು ವಿಚಾರಣೆ ವೇಳೆ ತಿಳಿದು ಬಂದಿದೆ.
ನಾಗರಾಜಶೆಟ್ಟಿ