ಕಣಿವೆ, ಡಿ. 9 : ಬದಲಾಗುತ್ತಿರುವ ಆಧುನಿಕ ಜೀವನ ಶೈಲಿಗೆ ಮಾರು ಹೋಗುತ್ತಿರುವ ಇಂದಿನ ಅದೆಷ್ಟೋ ಯುವಕರು ಹಳ್ಳಿಗಳನ್ನು ತೊರೆದು ನಗರಗಳತ್ತ ಮುಖ ಮಾಡುತ್ತಿರುವ ಈ ಹೊತ್ತಿನಲ್ಲಿ ಇಲ್ಲೊಬ್ಬ ಯುವಕ ಹೈನುಗಾರಿಕೆಯಲ್ಲಿ ಸಾಧನೆ ತೋರುವ ಮೂಲಕ ಯುವಕರಿಗೆ ಆದರ್ಶರಾಗಿದ್ದಾರೆ. ಅಷ್ಟೇ ಅಲ್ಲ. ಪರಂಪರಾನುಗತವಾಗಿ ಹೈನುಗಾರಿಕೆ ಮಾಡಿಕೊಂಡು ಬರುತ್ತಿರುವವರು ಕೂಡ ನಿಬ್ಬೆರಗಾಗುವ ಮಾದರಿಯಲ್ಲಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಆರ್ಥಿಕವಾಗಿ ಪ್ರಗತಿ ಸಾಧಿಸಿದ್ದಾರೆ. ಅವರ ಹೆಸರು ಬಿ.ಎಂ.ಸಾಗರ್. ಊರು ಗುಡ್ಡೆಹೊಸೂರು ಬಳಿಯ ಬಸವನಹಳ್ಳಿ. ಪಿಯುಸಿವರೆಗೆ ವ್ಯಾಸಂಗ ಮಾಡಿರುವ ಈ ಸಾಗರ್ ನನ್ನು ಸಾಗರದಂತಹ ಹೈನು ಹಾಗೂ ರೇಷ್ಮೆ ಕೃಷಿ ಕೈ ಬೀಸಿ ಕರೆದಿದೆ. ಹೈನುಗಾರಿಕೆ ಎಂಬದು ಕೊಡಗು ಜಿಲ್ಲೆಯಲ್ಲಿ ಸುಧಾರಣೆ ಕಾಣದ ದಶಕದ ಹಿಂದಿನ ದಿನಗಳಲ್ಲಿ ಗುಡ್ಡೆಹೊಸೂರು ಹಾಲಿನ ಡೇರಿಯ ಮೂಲಕ ಹಾಸನ ಹಾಲು ಒಕ್ಕೂಟದಲ್ಲಿ ವಿಶೇಷ ಸ್ಥಾನಮಾನ ಗಳಿಸಲು ಅಂದು ಬೆವರು ಸುರಿಸಿದ್ದ ಡೇರಿಯ ಕಾರ್ಯದರ್ಶಿಯೂ ಆಗಿದ್ದ, ತಂದೆ ಮಹಾದೇವಪ್ಪ ಅವರಿಂದ ಚಿಕ್ಕ ವಯಸ್ಸಿನಿಂದಲೂ ಕೃಷಿ ಹಾಗು ಹೈನುಗಾರಿಕೆಯಲ್ಲಿ ಪ್ರಭಾವಿತರಾದ ಸಾಗರ್ ಪಿಯು ಶಿಕ್ಷಣದ ನಂತರ ಓದಿ ಏನು ಸಾಧಿಸಬೇಕೋ ಅದನ್ನು ಸ್ವಯಂ ಕೃಷಿ ಕೈಗೊಳ್ಳುವ ಮೂಲಕವೇ ಸಾಧಿಸಬೇಕೆಂಬ ಛಲ ತೊಟ್ಟ ಸಾಗರ್ ಇಂದು ಪ್ರತೀ ದಿನ ಅಪ್ಪ ಬೆಳೆಸಿದ ಗುಡ್ಡೆಹೊಸೂರು ಹಾಲಿನ ಡೇರಿಗೆ ದಿನಂಪ್ರತಿ 80 ಲೀ. ನಷ್ಟು ಹಾಲು ಸರಬರಾಜು ಮಾಡುವ ಮೂಲಕ ದಾಖಲೆ ಬರೆಯಲು ದಾಪುಗಾಲು ಹಾಕುತ್ತಿದ್ದಾನೆ ಎಂದರೆ ಅತಿಶಯೋಕ್ತಿಯಲ್ಲ. ಇಲ್ಲಿ ಸಾಗರನ ಮತ್ತೊಂದು ಅಚ್ಚರಿಯ ವಿಶೇಷ ಏನು ಎಂದರೆ ತನ್ನ ಚಿಕ್ಕಪ್ಪ, ಅದೇ ಗುಡ್ಡೆಹೊಸೂರು ಹಾಲಿನ ಡೇರಿಯ ಹಾಲಿ ಅಧ್ಯಕ್ಷ ಬಿ.ಪಿ.ಗುರುಬಸಪ್ಪ ಅವರೂ ಕೂಡ ಗರಿಷ್ಠ 80 ಲೀಟರ್ ಹಾಲು ಹಾಕುತ್ತಿದ್ದು ಕಳೆದ ಹತ್ತು ವರ್ಷಗಳಿಂದಲೂ ಚಿಕ್ಕಪ್ಪನನ್ನು ಹೈನುಗಾರಿಕೆಯಲ್ಲಿ ಹಿಂದಿಕ್ಕುವ ತವಕದ ಕಾಯಕದಲ್ಲಿ ತೊಡಗಿಕೊಂಡಿದ್ದಾನೆ. ಬಸವನಹಳ್ಳಿಯ ಹೆರೂರು ರಸ್ತೆಯಂಚಿನ ತನ್ನ ಮನೆಯ ಆವರಣದಲ್ಲಿ ಪ್ರತ್ಯೇಕವಾಗಿ ಗೋಶಾಲೆಯನ್ನು ತೆರೆದಿದ್ದು ಇದೀಗ ಎಚ್ ಎಫ್ ಜರ್ಸಿ ಮಿಶ್ರ ತಳಿಯ ಹತ್ತು ಹಸುಗಳನ್ನು ಸಾಕಿದ್ದಾನೆ. ಈ ಹಸುಗಳಿಗೆ ನಿತ್ಯವೂ ಜಳಕ ಮಾಡಿಸಿ ಅಚ್ವುಕಟ್ಟಾದ ಕಾರ್ಯ ನಿರ್ವಹಿಸುತ್ತಿರುವ ಸಾಗರ್, ಹಸುಗಳನ್ನು ನಿತ್ಯವೂ ತೊಳೆದು ಶುಭ್ರವಾಗಿ ಇಟ್ಟು ಕೊಂಡಿದ್ದಾನೆ. ಅಷ್ಟೇ ಅಲ್ಲ, ನಿತ್ಯವೂ ಬೆಳಿಗ್ಗೆ ಮತ್ತು ಸಂಜೆ ಹಸುಗಳಿಂದ ಹಾಲು ಕರೆಯಲು ಯಂತ್ರಗಳನ್ನು ಬಳಸುತ್ತಿದ್ದಾನೆ. ತಾನು ಸಾಕಿರುವ ಹಸುಗಳ ಮೇವಿಗೆಂದು ಎರಡು ಎಕರೆ ಜಾಗದಲ್ಲಿ ಬೇಬಿ ಕಾರ್ನ್ ಬಿಳಿ ತೆನೆ ಜೋಳವನ್ನು ಬೆಳೆದಿದ್ದಾನೆ. ಅಲ್ಲದೇ ಒಂದು ಬದಿಯಲ್ಲಿ ಪಯನಿಯರ್ 3 ಎಂಬ ಹೈಬ್ರಿಡ್ ತಳಿಯ ಹುಲ್ಲನ್ನು ಬೆಳೆಸಿದ್ದಾನೆ. ಹಾಲು ಕೊಡುವ ಈ ಹಸುಗಳಿಗೆ ಡೈರಿಯಿಂದ ನೀಡುವ ಆಹಾರವಲ್ಲದೇ ರವೆ ಬೂಸಾ, ಜೋಳದ ಪುಡಿ, ಎಸ್ ಕೆ ಎಂ ಫೀಡ್ ಕೂಡ ನೀಡುತ್ತಿದ್ದು ಪ್ರತೀ ವಾರಕ್ಕೆ ಖರ್ಚು ತೆಗೆದು 13 ಸಾವಿರ ಆದಾಯ ಗಳಿಸುತ್ತಿರುವ ಸಾಗರ್ ಮಾಸಿಕ 52 ಸಾವಿರ, ವಾರ್ಷಿಕ ಆರು ಲಕ್ಷ ರೂಗಳ ಆದಾಯ ಗಳಿಸುತ್ತಿದ್ದಾನೆ. ಹೈನುಗಾರಿಕೆ ಅಲ್ಲದೇ ಪ್ರತ್ಯೇಕವಾಗಿ ಅರ್ಧ ಎಕರೆ ಜಾಗದಲ್ಲಿ ರೇಷ್ಮೆ ಗಿಡಗಳನ್ನು ಬೆಳೆದು ರೇಷ್ಮೆ ಬೆಳೆಯ ಅಭಿರುಚಿ ಹೊಂದಿರುವ ಈ ಸಾಗರ್ ಕಳೆದ ಐದು ವರ್ಷಗಳಿಂದ ರೇಷ್ಮೆ ಕೃಷಿ ಮಾಡುತ್ತಿದ್ದಾನೆ. ಬಸವನಹಳ್ಳಿ ಸುತ್ತಲಿನ ಪರಿಸರ ರೇಷ್ಮೆ ಬಿತ್ತನೆ ವಲಯವಾಗಿ ಮಾರ್ಪಟ್ಟಿರುವ ಕಾರಣ ಬೈವೊಲ್ಟನ್ ತಳಿಯ ರೇಷ್ಮೆ ಗೂಡು ಬೆಳೆಯುತ್ತಿದ್ದೇನೆ. ಇತರೇ ಬೆಳೆಗಳಿಗೆ ಹೋಲಿಸಿದಲ್ಲಿ ಈ ರೇಷ್ಮೆ ಅತ್ಯಂತ ಲಾಭದಾಯಕ ಎಂದು ಸ್ಥಳಕ್ಕೆ ತೆರಳಿದ್ದ “ಶಕ್ತಿ”ಯೊಂದಿಗೆ ಪ್ರತಿಕ್ರಿಯಿಸಿದ ಸಾಗರ್, ಯುವಕರು ಪೇಟೆ ಹಾಗೂ ನಗರಗಳಿಗೆ ಹೋಗಿ ಸಾಧಿಸುವುದೇನಿದೆ. ಎಲ್ಲರೂ ಓದಿ ಡಾಕ್ಟರ್, ಇಂಜಿನಿಯರ್, ರಾಜಕಾರಣಿ ಆಗಬಯಸುವ ಕನಸು ಕಾಣುವರೇ ಹೊರತು ಕೃಷಿಕನಾಗುವ ಕನಸೇಕೆ ಕಾಣುತ್ತಿಲ್ಲ. ಕೃಷಿಯಲ್ಲಿ ಸಿಗುವ “ಖುಷಿ’’ ಗೆ ಬೆಲೆ ಕಟ್ಟಲಾದೀತೆ ? ಎಂದು ಪ್ರಶ್ನಿಸುತ್ತಾರೆ ಸಾಗರ್. ಸಾಗರನಲ್ಲಿನ ಯಶಸ್ವಿ ಕೃಷಿಯ ಆಲೋಚನೆಯ ಕುರಿತು ಇಂದಿನ ಯುವ ಜನಾಂಗ ಅವಲೋಕನ ಮಾಡುವ ತುರ್ತು ಅನಿವಾರ್ಯತೆ ಇದೆ. ಹಳ್ಳಿಗಳಲ್ಲಿನ ಕೃಷಿಕರು ಖಾಯಾ ವಾಚಾ ಮನಸಿಟ್ಟು ನಿಜ ಕಾಯಕ ಮಾಡಿದರೆ ಅದರಲ್ಲಿ ಸಿಗುವ ಪರಮಾನಂದಕ್ಕೆ ಎಲ್ಲೆಯೇ ಇಲ್ಲ ಏನಂತೀರಾ ? ಸಾಗರನ ಹಾಗೆ ಹೈನುಗಾರಿಕೆ ಮಾಡುವ ಹಂಬಲವುಳ್ಳವರಿಗೆ ಇದೇ ಸಾಗರ್ ತನ್ನಲ್ಲಿರುವ ಅನುಭವಗಳ ಧಾರೆ ಎರೆಯುವ ಹಂಬಲ ತೋರುತ್ತಾನೆ. ಹೆಚ್ಚಿನ ವಿವರಗಳಿಗೆ ಅದೇ ಸಾಗರ್ ಜೊತೆ ಮಾತಾಡಲು ಆಸಕ್ತರು 96637-50168 ಈ ನಂಬರಿಗೆ ಕರೆ ಮಾಡಬಹುದು.
-ಕೆ. ಎಸ್. ಮೂರ್ತಿ.