ಗೋಣಿಕೊಪ್ಪ ವರದಿ, ಡಿ. 9: ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ಹಾಕಿಕೂರ್ಗ್ ಸಹಯೋಗದಲ್ಲಿ ನಡೆಯುತ್ತಿರುವ ಗುಮ್ಮಟ್ಟೀರ ಸೋಮಯ್ಯ ಜ್ಞಾಪಕಾರ್ಥ ಪುರುಷರ ಎ. ಡಿವಿಜನ್ ಹಾಕಿ ಲೀಗ್‍ನಲ್ಲಿ ನಾಪೋಕ್ಲು ಶಿವಾಜಿ ಹಾಗೂ ಬೊಟ್ಯತ್ನಾಡ್ ತಂಡಗಳು ಅಂತಿಮ ಸುತ್ತಿಗೆ ಪ್ರವೇಶ ಪಡೆದಿವೆ. ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಬಲಿಷ್ಠ ತಂಡಗಳ ನಡುವೆ ಕಪ್‍ಗಾಗಿ ಸೆಣೆಸಾಟ ನಡೆಯಲಿದೆ.
ಸೋಮವಾರ ನಡೆದ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ನಾಪೋಕ್ಲು ಶಿವಾಜಿ ತಂಡವು ಪೊನ್ನಂಪೇಟೆ ಸ್ಪೋಟ್ರ್ಸ್ ಹಾಸ್ಟೆಲ್ ತಂಡದ ವಿರುದ್ಧ 2-1 ಗೋಲುಗಳ ಜಯ ಸಾಧಿಸಿ ಫೈನಲ್‍ಗೆ ಲಗ್ಗೆ ಇಟ್ಟಿತು. ಶಿವಾಜಿ ಪರ 16 ನೇ ನಿಮಿಷದಲ್ಲಿ ಯತಿನ್, 29 ನೇ ನಿಮಿಷದಲ್ಲಿ ಪುನಿತ್, ಪೊನ್ನಂಪೇಟೆ ಪರ 39 ನೇ ನಿಮಿಷದಲ್ಲಿ ಧನುಶ್ ತಲಾ ಒಂದೊಂದು ಗೋಲು ಹೊಡೆದು ಸಂಭ್ರಮಿಸಿದರು.
ದ್ವಿತೀಯ ಸೆಮಿ ಫೈನಲ್‍ನಲ್ಲಿ ಬೊಟ್ಯತ್ನಾಡ್ ತಂಡವು ಮಡಿಕೇರಿ ಚಾರ್ಮರ್ಸ್ ತಂಡವನ್ನು 2-1 ಗೋಲುಗಳಿಂದ ಮಣಿಸಿತು. ಬೊಟ್ಯತ್ನಾಡ್ ಪರ 40ನೇ ನಿಮಿಷದಲ್ಲಿ ಪ್ರಜ್ವಲ್, 59ನೇ ನಿಮಿಷದಲ್ಲಿ ಬೋಪಯ್ಯ ಗೋಲು ಹೊಡೆದರು. ಚಾರ್ಮರ್ಸ್ ಪರ 22ನೇ ನಿಮಿಷದಲ್ಲಿ ಕೀರ್ತಿ ಒಂದು ಗೋಲು ಹೊಡೆದರು.
ಸಮಾರೋಪದಲ್ಲಿ ಹಾಕಿಕೂರ್ಗ್ ಜಂಟಿ ಕಾರ್ಯದರ್ಶಿ ಕಂಬೀರಂಡ ದಿವ್ಯಾ ಮುತ್ತಪ್ಪ, ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ನೆಲ್ಲಚಂಡ ಕಿರಣ್ ಕಾರ್ಯಪ್ಪ, ದಾನಿಯಾದ ಗುಮ್ಮಟ್ಟೀರ ಕಿಲನ್ ಗಣಪತಿ, ಸಣ್ಣುವಂಡ ಎಂ. ಸುರೇಶ್, ಕಾಟಿಮಾಡ ರಾಜಪ್ಪ, ವೀಣಾ ಉಪಸ್ಥಿತಲಿರುವರು.
- ಸುದ್ದಿಮನೆ