ವೀರಾಜಪೇಟೆ: ಡಿ, 9: ಆರೋಗ್ಯವಂತ ಸಮಾಜವನ್ನು ಕಾಣಬೇಕಾದರೆ ಪ್ರತಿಯೊಬ್ಬರು ಈ ಮಾರಕ ರೋಗದ ಬಗ್ಗೆ ಜಾಗೃತ ರಾಗಿರಬೇಕು ಎಂದು ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಅಧಿಕಾರಿ ಸುನೀತಾ ಮುತ್ತಣ್ಣ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಅಮ್ಮತಿಯ ಸರಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ವೀರಾಜಪೇಟೆ ಸೆಂಟ್ ಆನ್ಸ್ ಪದವಿ ಕಾಲೇಜಿನ ರಾ.ಸೇಯೋ. ಘಟಕದ ವಾರ್ಷಿಕ ಶಿಬಿರದಲ್ಲಿ ಏಡ್ಸ್ ಬಗ್ಗೆ ಅರಿವಿನ ಕಾರ್ಯಾಗಾರದಲ್ಲಿ ಮಾತನಾಡಿದ ಸುನಿತಾ ಮುತ್ತಣ್ಣ ಹೆಚ್‍ಐವಿ/ಏಡ್ಸ್ ಕಾಯಿಲೆ ನಿಯಂತ್ರಿಸುವಲ್ಲಿ ಆರೋಗ್ಯ ಶಿಕ್ಷಣ ಮುಖ್ಯವಾಗಿದ್ದು, ಶಾಲಾ, ಕಾಲೇಜುಗಳಲ್ಲಿ ಇಂತಹ ಕಾರ್ಯ ಕ್ರಮಗಳ ಮುಖಾಂತರ ತಿಳುವಳಿಕೆ ನೀಡಿದರೆ ಕೆಲವೇ ವರ್ಷಗಳಲ್ಲಿ ಈ ಕಾಯಿಲೆ ಗಣನೀಯವಾಗಿ ಇಳಿಮುಖ ವಾಗುತ್ತದೆ ಎಂದರು.

ಕಾರ್ಮಾಡು ಗ್ರಾಮ ಪಂಚಾಯತ್ ಸದಸ್ಯರಾದ ಮುಕ್ಕಾಟಿರ ಸಂತೋಷ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾತನಾಡಿ ಭಾರತೀಯ ಸಂಸ್ಕøತಿಯು ಆರೋಗ್ಯಕ್ಕೆ ಪೂರಕವಾಗಿದ್ದು, ನಾಗರೀಕರಲ್ಲಿ ಮೌಲ್ಯಗಳು ಹೆಚ್ಚುವಂತೆ ಮಾಡುತ್ತದೆ. ಆರೋಗ್ಯ ಮಾನವನ ಜೀವನದ ಅವಿಭಾಜ್ಯ ಅಂಗವಾಗಿದ್ದು ಪ್ರತಿ ಗ್ರಾಮದಲ್ಲಿರುವ ಸುಶಿಕ್ಷಿತರು ಸಾಂಘಿಕ ಪ್ರಯತ್ನ ಹಾಗೂ ತಿಳುವಳಿಕೆ ಮೂಡಿಸುವುದರ ಮುಖಾಂತರ ಈ ರೋಗ ತಹಬದಿಗೆ ತರಬಹುದು ಎಂದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಪ್ರಶ್ನೆಯನ್ನು ಕೇಳುವದರ ಮುಖಾಂತರ ತಮ್ಮ ಸಂದೇಹಗಳನ್ನು ಬಗೆಹರಿಸಿದರು. ವಿದ್ಯಾರ್ಥಿ ಗಳು ಆರೋಗ್ಯದ ಜಾಗೃತಿ ಬಗ್ಗೆ ಮಾಹಿತಿ ಪಡೆದರು. ಈ ಸಂದರ್ಭ ರಾ.ಸೇ.ಯೋ. ಘಟಕದ ಅಧಿಕಾರಿ ಅರ್ಜುನ್ ಉಪಸ್ಥಿತರಿದ್ದರು.