ಮಡಿಕೇರಿ, ಡಿ. 9: ಪ್ರಸಕ್ತ ತಿಂಗಳಿನ ತಾ. 26ರಂದು ಖಗೋಳದಲ್ಲಿ ಕೌತುಕ ಮೂಡಿಸಲಿರುವ ಕಂಕಣ ಸೂರ್ಯಗ್ರಹಣ (ಂಟಿಟಿuಟಚಿಡಿ Soಟಚಿಡಿ ಇಛಿಟiಠಿs) ನಡೆಯಲಿದೆ. ದಕ್ಷಿಣ ಕೊಡಗಿನ ಕುಟ್ಟ ಗ್ರಾಮದಲ್ಲಿ ಗೋಚರವಾಗಲಿದೆ. ಇದರ ವೀಕ್ಷಣೆಗಾಗಿ ಮೈಸೂರಿನ ಮೈಸೂರು ಸೈನ್ಸ್ ಫೌಂಡೇಶನ್ (ಎಂ.ಎಸ್.ಎಫ್) ಹಾಗೂ ಪೂನಾ ಮೂಲದ ಸಂಸ್ಥೆಯ ಸಹಯೋಗದಲ್ಲಿ ಕಾರ್ಯಕ್ರಮ ವ್ಯವಸ್ಥೆ ಮಾಡಲಾಗುತ್ತಿದೆ. ತಾ.26ರಂದು ಬೆ.8.04ರಿಂದ 11.03ರವರೆಗೆ ಈ ಕಂಕಣ ಸೂರ್ಯಗ್ರಹಣ ಗೋಚರಿಸಲಿದೆ ಎಂದು ತಿಳಿದುಬಂದಿದೆ. ಕರ್ನಾಟಕದ ದಕ್ಷಿಣ ಭಾಗದ ಉಡುಪಿ, ಕೊಡಗಿನ ಕುಟ್ಟ, ತಮಿಳುನಾಡಿನ ಕೊಯಮತ್ತೂರಿನಲ್ಲಿ ಕಂಕಣ ಸೂರ್ಯಗ್ರಹಣ ಸಂಪೂರ್ಣವಾಗಿ ಗೋಚರಿಸಲಿದೆ ಎಂದು ವಿಜ್ಞಾನಿಗಳು ತಿಳಿಯಪಡಿಸಿದ್ದಾರೆ. ವೀಕ್ಷಣೆ ಬಗ್ಗೆ ಈಗಾಗಲೇ ಅರಿವು ಮೂಡಿಸಲಾಗುತ್ತಿದೆ. ಗ್ರಹಣ ವೀಕ್ಷಣೆ ಪೂರ್ವ ತಯಾರಿಯನ್ನು ಇಂಡಿಯನ್ ಬುಕ್ ಆಫ್ ರೆಕಾರ್ಡ್ನಲ್ಲಿ ದಾಖಲೆ ಮಾಡಲು ಕೂಡ ಸಿದ್ಧತೆ ನಡೆದಿದೆ. ಡಿ. 17ರಂದು ಏಕಕಾಲದಲ್ಲಿ ದೇಶಾದ್ಯಂತ ಕಂಕಣ ಸೂರ್ಯಗ್ರಹಣ ವೀಕ್ಷಣೆಯನ್ನು ಹೇಗೆ ನೋಡಬಹುದು ಎಂಬದರ ವೀಡಿಯೋವನ್ನು ಕೂಡ ತೋರಿಸಲಾಗುತ್ತದೆ ಎಂದು ಮೈಸೂರು ಸೈನ್ಸ್ ಫೌಂಡೇಶನ್ ಪ್ರಮುಖರು ಮಾಹಿತಿ ನೀಡಿದ್ದಾರೆ.
ಈಗಾಗಲೇ ಶಾಲಾ - ಕಾಲೇಜುಗಳಲ್ಲಿ ಈ ಬಗ್ಗೆ ಅರಿವು ಮೂಡಿಸಲಾಗುತ್ತಿದ್ದು, ನೋಂದಣಿ ಪ್ರಾರಂಭಿಸಲಾಗಿದೆ. ಈ ಗ್ರಹಣವನ್ನು ಬರಿಗಣ್ಣಿನಿಂದ ನೋಡುವದು ಅಪಾಯ. ವಿಶೇಷ ಕನ್ನಡಕ ಧರಿಸಿಯೇ ನೋಡಬೇಕು ಎನ್ನಲಾಗಿದೆ.