ಕುಶಾಲನಗರ, ಡಿ. 8: ತುರ್ತು ಸ್ಥಿತಿಯಲ್ಲಿ ಅಪಾಯಕ್ಕೆ ಸಿಲುಕಿಕೊಂಡ ಜನರಿಗೆ ಸಹಾಯಹಸ್ತ ನೀಡುವ ಮನೋಭಾವನೆಯನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕೆಂದು ಕುಶಾಲನಗರ ರೋಟರಿ ಅಧ್ಯಕ್ಷ ಎಂ.ಡಿ.ಅಶೋಕ್ ತಿಳಿಸಿದ್ದಾರೆ. ಅವರು ಕುಶಾಲನಗರದ ಅನುಗ್ರಹ ಕಾಲೇಜಿನಲ್ಲಿ ಇಂಡಿಯನ್ ರೆಡ್ಕ್ರಾಸ್ ಘಟಕದ ವತಿಯಿಂದ ನಡೆದ ಪ್ರಥಮ ಚಿಕಿತ್ಸೆ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದರು.
ಆಕಸ್ಮಿಕ ಘಟನೆಗಳ ಸಂದರ್ಭ ಪ್ರಥಮ ಚಿಕಿತ್ಸೆ ನೀಡಿ ಜೀವ ಉಳಿಸುವ ಮಹತ್ತರ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದರು.
ಕುಶಾಲನಗರ ತಾಲೂಕು ರೆಡ್ ಕ್ರಾಸ್ ಸಂಸ್ಥೆ ಅಧ್ಯಕ್ಷ ಎಸ್.ಕೆ.ಸತೀಶ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ.ಕೀರ್ತಿಪಾಲನ್ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಪ್ರಥಮ ಚಿಕಿತ್ಸಾ ತರಬೇತಿ ಬಗ್ಗೆ ಮತ್ತು ಜೀವರಕ್ಷಣೆಯ ಬಗ್ಗೆ ವಿವರಣೆ ಒದಗಿಸಿದರು. ಅಪಘಾತ, ಸುಟ್ಟಗಾಯ, ಮೂರ್ಛೆರೋಗ, ಹೃದಯಾಘಾತ ಮೊದಲಾದ ಸಂದರ್ಭಗಳಲ್ಲಿ ನೀಡಬಹುದಾದ ಪ್ರಥಮ ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಿದರು.
ರೆಡ್ಕ್ರಾಸ್ ಸಂಸ್ಥೆ ಉಪಾಧ್ಯಕ್ಷ ಎಂ.ಡಿ.ರಂಗಸ್ವಾಮಿ, ಅನುಗ್ರಹ ವಿದ್ಯಾಸಂಸ್ಥೆ ನಿರ್ದೇಶಕರಾದ ನಾಗೇಂದ್ರ ಬಾಬು, ಚಂದ್ರಶೇಖರ್, ಶೋಭಾ ಸತೀಶ್, ಪ್ರಾಂಶುಪಾಲ ಪಂಡರಿನಾಥ ನಾಯ್ಡು, ರೆಡ್ ಕ್ರಾಸ್ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಕೆ.ಪಿ.ಚಂದ್ರಶೇಖರ್ ಮತ್ತಿತರರು ಇದ್ದರು.