ಒಡೆಯನಪುರ, ಡಿ.8: ಮನೆಗಳಲ್ಲಿ ಪ್ರತಿಯೊಬ್ಬರು ತಮ್ಮ ಸಾಕುಪ್ರಾಣಿಗಳಿಗೆ ರೇಬಿಸ್ ನಿರೋಧಕ ಲಸಿಕೆಯನ್ನು ಹಾಕಿಸುವ ಮೂಲಕ ಕಾಯಿಲೆಯನ್ನು ತಡೆಗಟ್ಟಬಹುದು ಎಂದು ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಕೆ.ನಾಗರಾಜ್ ಅಭಿಪ್ರಾಯಪಟ್ಟರು. ಶನಿವಾರಸಂತೆ ರೋಟರಿ ಕ್ಲಬ್, ಸೋಮವಾರಪೇಟೆ ಪಶುಪಾಲನಾ ಇಲಾಖೆ ಹಾಗೂ ಹಂಡ್ಲಿ ಗ್ರಾ.ಪಂ. ಆಶ್ರಯದಲ್ಲಿ ಗುಡುಗಳಲೆ ಜಾತ್ರಾ ಮೈದಾನದಲ್ಲಿ ಹಮ್ಮಿಕೊಂಡಿದ್ದ 3ನೇ ವರ್ಷದ ರೇಬಿಸ್ ನಿರೋಧಕ ಲಸಿಕಾ ಶಿಬಿರದಲ್ಲಿ ಮಾತನಾಡುತ್ತಿದ್ದರು.

ಸೋಮವಾರಪೇಟೆ ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಶಿವಪ್ರಸಾದ್ ರೇಬಿಸ್ ಕಾಯಿಲೆ ಕುರಿತು ಮಾತನಾಡಿದರು. ರೋಟರಿ ವಲಯ ಸಹಾಯಕ ಗೌರ್ನರ್ ಪಿ.ನಾಗೇಶ್ ಮಾತನಾಡಿ- ರೋಟರಿ ಸಂಸ್ಥೆಯು ಹಲವಾರು ಸಮಾಜ ಸೇವೆಯನ್ನು ಮಾಡುತ್ತಿದ್ದು, ಪ್ರಾಣಿ-ಪಕ್ಷಿಗಳಿಗೆ ಮನುಷ್ಯನಂತೆ ಜೀವಿಸಲು ಹಕ್ಕು ಇರುತ್ತದೆ ಎಂದರು.

ಶನಿವಾರಸಂತೆ ರೋಟರಿ ಕ್ಲಬ್ ಅಧ್ಯಕ್ಷ ಎಸ್.ವಿ.ಶಿಭು, ಹಂಡ್ಲಿ ಗ್ರಾ.ಪಂ.ಅಧ್ಯಕ್ಷ ಎಚ್.ಎನ್. ಸಂದೀಪ್, ರೋಟರಿ ಕ್ಲಬ್ ಪ್ರಮುಖರಾದ ಎಚ್.ಎಸ್. ವಸಂತ್‍ಕುಮಾರ್, ಎಚ್.ಪಿ. ದಿವಾಕರ್, ಪಶು ವೈದ್ಯಾಧಿಕಾರಿ ಡಾ.ಸತೀಶ್‍ಕುಮಾರ್ ಹಾಜರಿದ್ದರು.