ಶೋಭಾ ಮೋಹನ್
ನಾಪೋಕ್ಲು, ಡಿ. 8: ಬೆಳೆಗಾರರು ಎಲ್ಲರೂ ತಮ್ಮ ತೋಟಗಳ ಮಣ್ಣಿನ ಪರೀಕ್ಷೆಯನ್ನು ಮಾಡಿಸಿ ಅದರ ವಿಶ್ಲೇಷಣಾ ವರದಿಯಂತೆ ಗೊಬ್ಬರಗಳನ್ನು ತೋಟಕ್ಕೆ ನೀಡಿದರೆ ಉತ್ತಮ ಇಳುವರಿ ಪಡೆಯಬಹುದು ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ಹೇಳಿದರು.
ಇಲ್ಲಿಗೆ ಸಮೀಪದ ಹಳೆ ತಾಲೂಕಿನ ಭಗವತಿ ದೇವಾಲಯದ ಸಭಾಂಗಣದಲ್ಲಿ ಕೃಷಿ ಇಲಾಖೆ ಮತ್ತು ಆತ್ಮ ಯೋಜನೆಯಡಿಯಲ್ಲಿ ನಡೆದ ವಿಶ್ವ ಮಣ್ಣು ಆರೋಗ್ಯ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಣ್ಣು ಸವೆತವನ್ನು ತಡೆಗಟ್ಟಿ ಮುಂದಿನ ಪೀಳಿಗೆಗೆ ಭವಿಷ್ಯವನ್ನು ಉಳಿಸಬೇಕು. ಪ್ಲಾಸ್ಟಿಕ್ ಮತ್ತಿತರ ಅನುಪಯುಕ್ತ ವಸ್ತುಗಳನ್ನು ರಾಸಾಯನಿಕಗಳನ್ನು ಮಣ್ಣಿಗೆ ಹಾಕಿ ಮಣ್ಣು ಮಾಲಿನ್ಯ ಮಾಡಬಾರದು ಎಂದರು.
ಕಾಫಿ ಮಂಡಳಿಯ ಮಣ್ಣು ವಿಷಯ ತಜ್ಞ ಡಾ. ಶಿವಪ್ರಸಾದ್ ಮಣ್ಣು ಮಾದರಿ ತೆಗೆಯುವ ಬಗ್ಗೆ, ಮಣ್ಣಿನ ವಿಶ್ಲೇಷಣೆಯ ನಂತರ ನೀಡುವ ಶಿಫಾರಸ್ಸಿನಂತೆ ರಸಗೊಬ್ಬರ ಬಳಕೆ ಬಗ್ಗೆ ಮಾಹಿತಿ ನೀಡಿದರು. ಮಡಿಕೇರಿಯ ಕೃಷಿ ಮತ್ತು ತೋಟಗಾರಿಕಾ ವಿಸ್ತರಣಾ ಘಟಕದ ಬೇಸಾಯ ಶಾಸ್ತ್ರ ತಜ್ಞ ಡಾ. ಬಸವಲಿಂಗಯ್ಯ, ಮಣ್ಣಿನ ರಸಸಾರದ ಸಮತೋಲನ ಮತ್ತು ಉತ್ಪಾದನೆ ಹೆಚ್ಚಿಸುವಲ್ಲಿ ಸಾವಯವ ಗೊಬ್ಬರಗಳ ಬಳಕೆ ಕುರಿತು ಮಾಹಿತಿ ನೀಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎ. ಇಸ್ಮಾಯಿಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ, ತಾಲೂಕು ಪಂಚಾಯಿತಿ ಸದಸ್ಯೆ ಇಂದಿರಾ ಹರೀಶ್, ಮಡಿಕೇರಿ ತಾಲೂಕು ಎಪಿಎಂಸಿ ಅಧ್ಯಕ್ಷ ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಪಾಲ್ಗೊಂಡಿದ್ದರು. ನಾಪೋಕ್ಲು ಹೋಬಳಿ ಕೃಷಿ ಅಧಿಕಾರಿ ನಾರಾಯಣ ರೆಡ್ಡಿ ರೈತ ಸಂಪರ್ಕ ಕೇಂದ್ರದ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.