ಸಿದ್ದಾಪುರ, ಡಿ. 8: ಸಂತ್ರಸ್ತರು ಪರಿಹಾರ ಕೇಂದ್ರವನ್ನು ತೊರೆಯಲು ನಿರ್ಧರಿಸಿದ್ದು ಜಿಲ್ಲಾಡಳಿತದ ಮನವಿಗೆ ಸ್ಪಂದಿಸಿದ್ದಾರೆ. ಉಪವಿಭಾಗಧಿಕಾರಿ ಜವರೇಗೌಡ ಅವರ ಮನವಿ ಹಾಗೂ ಪುನರ್ವಸತಿಗೆ ಜಾಗ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ನೀಡಿದ ಭರವಸೆ ಮೇರೆಗೆ ಪರಿಹಾರ ಕೇಂದ್ರವನ್ನು ಇಂದಿನಿಂದಲೇ ತೊರೆಯಲು ಒಮ್ಮತದಿಂದ ಸಂತ್ರಸ್ತರು ಸಭೆಯಲ್ಲಿ ನಿರ್ಧರಿಸಿದ್ದಾರೆ.

ಈ ಬಾರಿಯ ಪ್ರವಾಹಕ್ಕೆ ಸಿಲುಕಿ ನೆಲ್ಯಹುದಿಕೇರಿ ಗ್ರಾಮದ ಬೆಟ್ಟದಕಾಡು, ಕುಂಬಾರ ಗುಂಡಿ ಭಾಗದ ನದಿತೀರದ ನೂರಾರು ಮನೆಗಳು ನೆಲಸಮಗೊಂಡಿತ್ತು. ಈ ಹಿನ್ನೆಲೆಯಲ್ಲಿ ಮನೆ-ಮಠಗಳನ್ನು ಕಳೆದುಕೊಂಡ ಸಂತ್ರಸ್ತರು ಸ್ಥಳೀಯ ಸರ್ಕಾರಿ ಶಾಲೆಯಲ್ಲಿರುವ ಪರಿಹಾರ ಕೇಂದ್ರದಲ್ಲಿ ತಮ್ಮ ಸಂಸಾರದೊಂದಿಗೆ ಆಶ್ರಯ ಪಡೆಯುತ್ತಿದ್ದರು ಅಲ್ಲದೆ ತಮಗೆ ಶಾಶ್ವತ ಸೂರು ಒದಗಿಸಿ ಕೊಡುವವರೆಗೂ ಪರಿಹಾರ ಕೇಂದ್ರವನ್ನು ಬಿಟ್ಟು ತೆರಳುವದಿಲ್ಲ ಎಂದು ಪಟ್ಟುಹಿಡಿದಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಅರೆಕಾಡುವಿನಲ್ಲಿರುವ ಅಭ್ಯತ್‍ಮಂಗಲ ಗ್ರಾಮದ ಸರ್ವೆ ನಂಬರ್ ಒಂದರಲ್ಲಿ ಒತ್ತುವರಿ ಭೂಮಿಯನ್ನು ವಶಕ್ಕೆ ಪಡೆದುಕೊಂಡು ತೆರವು ಕಾರ್ಯಾಚರಣೆ ಬಿರುಸಿನಿಂದ ಸಾಗುತ್ತಿದೆ ಈ ಹಿನ್ನೆಲೆಯಲ್ಲಿ ಶನಿವಾರದಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ಸೂಚನೆ ಮೇರೆಗೆ ಜಿಲ್ಲಾ ಉಪವಿಭಾಗಾಧಿಕಾರಿ ಜವರೇಗೌಡ ಅವರು ಸಂತ್ರಸ್ತರ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ ಸಂತ್ರಸ್ತರ ಬಳಿ ಪರಿಹಾರ ಕೇಂದ್ರವನ್ನು ತೊರೆಯುವಂತೆ ಮನವಿ ಮಾಡಿಕೊಂಡರು.

ಈ ಹಿನ್ನೆಲೆಯಲ್ಲಿ ಸಂತ್ರಸ್ತರು ಪರಿಹಾರ ಕೇಂದ್ರದಲ್ಲಿ ಸಭೆ ಸೇರಿ ಜಿಲ್ಲಾಡಳಿತದ ಮನವಿಗೆ ಸ್ಪಂದಿಸಿದ್ದು ತಾ. 9 ರಂದು (ಇಂದು) ಪರಿಹಾರ ಕೇಂದ್ರವನ್ನು ತೊರೆದು ಕೆಲವು ಕುಟುಂಬಗಳು ಈ ಹಿಂದೆ ವಾಸ ಮಾಡಿಕೊಂಡಿದ್ದ ಸ್ಥಳಕ್ಕೆ ತೆರಳಲು ಅಲ್ಲಿ ನಿರ್ಮಿಸಿದ ಶೆಡ್ಡಿನಲ್ಲಿ ವಾಸಿಸಲು ಹಾಗೂ ಬಾಡಿಗೆ ಮನೆಯಲ್ಲಿ ವಾಸಿಸಲು ನಿರ್ಧರಿಸಿದ್ದಾರೆ. ಅಲ್ಲದೆ ಸಂತ್ರಸ್ತರಿಗೆ ಅರೆಕಾಡು ಗ್ರಾಮದಲ್ಲಿ ಪುನರ್ವಸತಿ ಕಲ್ಪಿಸಿದ ನಂತರ ಅಲ್ಲಿ ವಾಸಮಾಡಲು ಸಂತ್ರಸ್ತರ ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಸೆಫಿಯ ಹೋರಾಟ ಸಮಿತಿಯ ಪ್ರಮುಖರಾದ ಪಿ.ಆರ್. ಭರತ್, ಗ್ರಾ.ಪಂ. ಸದಸ್ಯರುಗಳು ಹಾಗೂ ನೂರಾರು ಸಂತ್ರಸ್ತರು ಹಾಜರಿದ್ದರು

ವರದಿ: ವಾಸು ಎ.ಎನ್.