ವೀರಾಜಪೇಟೆ, ಡಿ. 8: ಕೊಡಗಿನಲ್ಲಿ ಎರವ ಜನಾಂಗಕ್ಕೆ ಭೂಮಿಯ ಬೇಡಿಕೆಗೆ ಈತನಕ ನಡೆಸಿದ ಹೋರಾಟಕ್ಕೆ ಫಲ ದೊರೆತಿಲ್ಲ. ಇದೇ ಬೇಡಿಕೆ ಒತ್ತಾಯಿಸಿ ತಾ. 18 ರಂದು ವೀರಾಜ ಪೇಟೆಯ ತಾಲೂಕು ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಲು ತೀರ್ಮಾನಿಸಿರುವದಾಗಿ ಕೊಡಗು ಯರವ ಒಕ್ಕೂಟದ ಕಾರ್ಯದರ್ಶಿ ಪಿ.ಎಸ್. ಮುತ್ತ ತಿಳಿಸಿದರು. ಪಟ್ಟಣದ ಮುಖ್ಯ ರಸ್ತೆಯಲ್ಲಿ ಜನಾಂಗದ ವಿಶಿಷ್ಟ ಉಡಪು ತೊಟ್ಟು, ಚೀಣಿವಾದ್ಯದೊಂದಿಗೆ ಮೆರವಣಿಗೆ ನಡೆಸಲಾಗುತ್ತದೆ ಎಂದು ಮುತ್ತ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಯರವ ಜನಾಂಗ ವಾಸಿಸುತ್ತಿದ್ದ ಭೂಮಿಯನ್ನು ವನ್ಯಜೀವಿ ತಾಣ ಎಂದು ಘೋಷಣೆ ಮಾಡಿ ಕಡು ಬಡವರು, ಕೂಲಿ ಕಾರ್ಮಿಕರೆನ್ನದೆ ಬಲವಂತದಿಂದ ಹೊರ ಹಾಕಿದರು. ಪಾರಂಪರಿಕ ಭಾವನೆಯೊಂದಿಗೆ ಅಲ್ಲಿದ್ದ ನಮ್ಮ ದೈವ, ಹಿರಿಯರ ಸಮಾಧಿ ಎಲ್ಲವನ್ನು ನಾಶ ಮಾಡಿ ಅಟ್ಟಹಾಸ ಮೆರೆದರು. ಇದರಿಂದ ಯರವರ ಸಮುದಾಯ ಸಾಕಷ್ಟು ದೈಹಿಕ ಹಾಗೂ ಮಾನಸಿಕ ಹಿಂಸೆ ಅನುಭವಿಸುತ್ತಿದ್ದಾರೆ. ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಸರಕಾರ ಹಾಗೂ ಅಧಿಕಾರಿಗಳು ನೆರವಿನ ನಾಟಕವಾಡಿ, ಯರವರ ಕುಟುಂಬಗಳನ್ನು ನೆರೆ ಜಿಲ್ಲೆಗೆ ಸಾಗಿಸಿದರು. ಅಲ್ಲಿ ಯರವ ಸಮುದಾಯದ ಮೂಲವನ್ನೇ ನಾಶ ಮಾಡಲಾಯಿತು. ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲಾಗದೆ ಅನೇಕ ಕುಟುಂಬಗಳ ಪ್ರಮುಖರು ಜೀವವನ್ನು ಕಳೆದುಕೊಂಡು ಸಮುದಾಯದ ಅವನತಿಗೆ ಕಾರಣರಾದರು ಎಂದು ದೂರಿದರು. ಒಕ್ಕೂಟದ ಅಧ್ಯಕ್ಷ ವೈ.ಬಿ. ಗಣೇಶ್ ಮಾತನಾಡಿ, ಸರಕಾರಕ್ಕೆ, ಜಿಲ್ಲಾಡಳಿತಕ್ಕೆ ಯರವ ಸಮುದಾಯದ ಮೇಲೆ ಕರುಣೆ ಇಲ್ಲದಾಗಿದೆ. ಇಂದಿಗೂ ನಮ್ಮ ಜನಾಂಗದವರಿಗೆ ಭೂಮಿ ಇಲ್ಲ, ಸ್ವಂತ ಸೂರಿಲ್ಲದೆ ಅತಂತ್ರ ಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದಾರೆ ಎಂದು ದೂರಿದರು.

ತಾ. 18 ರಂದು ಬೆಳಿಗ್ಗೆ 10 ಗಂಟೆಗೆ ಮಾರಿಯಮ್ಮ ದೇವಾಲಯದಿಂದ ತಾಲೂಕು ಕಚೇರಿಯ ತನಕ ಮೆರವಣಿಗೆ, ಮನವಿ ಸಲ್ಲಿಸಿದ ನಂತರ ಮುಖ್ಯರಸ್ತೆಯ ಮೂಲಕ ಮೆರವಣಿಗೆಯಲ್ಲಿ ಸಮುಚ್ಚಯ ಪೊಲೀಸ್ ಠಾಣೆಗೆ ತೆರಳಿ ಅಲ್ಲಿಯೂ ಮನವಿ ಸಲ್ಲಿಸಲಾಗುವದೆಂದು ಒಕ್ಕೂಟದ ಕಾರ್ಯದರ್ಶಿ ವಿ.ಸಿ. ಶಂಕರ್ ತಿಳಿಸಿದರು.