ಕಣಿವೆ, ಡಿ. 8: ಜೀವ ನದಿ ಕಾವೇರಿಯನ್ನು ಸಂರಕ್ಷಿಸಿ, ರಕ್ಷಿಸಿ, ಉಳಿಸಿ, ನದಿಗೆ ತ್ಯಾಜ್ಯಗಳನ್ನು ಬಿಸಾಕಬೇಡಿ. ಅನುಪಯುಕ್ತ ವಸ್ತುಗಳನ್ನು ಹಾಕಬೇಡಿ...ಕಾವೇರಿಯನ್ನು ಅದರ ಪಾಡಿಗೆ ಅದು ಹರಿಯಲು ಬಿಡಿ ಎಂದು ಇತ್ತೀಚೆಗಷ್ಟೇ ನಡೆದ ಕಾವೇರಿ ನದಿ ಹಬ್ಬದಲ್ಲಿ ಸಾರ್ವಜನಿಕರಿಗೆ ಕೋರಿಕೆಯನ್ನು ಸಲ್ಲಿಸಿದ್ದಾಯಿತು. ಆದರೆ, ನಿಮ್ಮ ಕೆಲಸ ನೀವು ಮಾಡಿ. ನಮ್ಮ ಕೆಲಸ ಮಾಡ್ತಾನೆ ಇರ್ತೇವೆ ಎಂಬಂತೆ ಕೆಲವರು ನದಿಯನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇಂತಹ ಘಟನೆ ಕಣಿವೆ ಬಳಿಯ ಕಾವೇರಿ ನದಿಯೊಳಗೆ ಎಗ್ಗಿಲ್ಲದೇ ನಡೆಯುತ್ತಿದ್ದರೂ ಕೂಡ ಸಂಬಂಧಿಸಿದ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ.

ಕುಶಾಲನಗರ ಹಾಸನ ಹೆದ್ದಾರಿಯ ಹುಲುಸೆ ಗ್ರಾಮದ ಬಳಿ ರಸ್ತೆಯಂಚಿನಲ್ಲಿದ್ದ ಕಲ್ಲಿನ ಗುಡ್ಡವೊಂದನ್ನು ನೆಲಸಮ ಮಾಡಿದ ಪ್ರಭಾವಿ ವ್ಯಕ್ತಿಯೊಬ್ಬರು ತಮ್ಮ ಜಾಗವನ್ನು ಸಮತಟ್ಟು ಗೊಳಿಸಿಕೊಳ್ಳಲು ತಿಂಗಳು ಗಟ್ಟಲೇ ಯಂತ್ರಗಳನ್ನು ಬಳಸಿ ಭೂಮಿಯೊಳಗಿಂದ ಹೊರ ತೆಗೆದ ಬೃಹತ್ ಕಲ್ಲಿನ ರಾಶಿಗಳನ್ನು ಕಾವೇರಿ ನದಿಯೊಳಗೆ ಸುರಿಯುತ್ತಿದ್ದಾರೆ ಹೆಬ್ಬಂಡೆಗಳನ್ನು ಇಲ್ಲಿ ಸುರಿಯಲಾಗುತ್ತಿದೆ. ಇದರಿಂದ ನದಿಯ ದಂಡೆಯ ನಿವಾಸಿಗಳಿಗೆ ಮುಂದಿನ ದಿನಗಳಲ್ಲಿ ತೀವ್ರ ತರದ ಅನಾನುಕೂಲ ಹಾಗೂ ಅನಾಹುತಗಳು ಉಂಟಾಗಲಿದೆ. ಹೇಗೆಂದರೆ ನದಿ ದಂಡೆಯಲ್ಲಿ ಸ್ನಾನಕ್ಕೆಂದು ತೆರಳಿ ಮುಳುಗಿದವರನ್ನು ಹೊರ ತೆಗೆಯಲು ಮತ್ತು ಜಾನುವಾರುಗಳು ನೀರಿನಲ್ಲಿ ಸಿಲುಕಿದರೆ ಹೊರತೆಗೆಯಲು ಬೃಹತ್ ಬಂಡೆಗಳು ಯಮ ಸ್ವರೂಪಿಗಳಾಗಲಿವೆ. ಕೂಡಲೇ ಇಲ್ಲಿ ಅಳವಡಿಸಿರುವ ಕಲ್ಲುಗಳನ್ನು ಅದೇ ವ್ಯಕ್ತಿಯಿಂದ ಹೊರತೆಗೆಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

-ಮೂರ್ತಿ