ಗೋಣಿಕೊಪ್ಪಲು, ಡಿ. 7: ಪೆÇನ್ನಂಪೇಟೆ ಸರ್ಕಾರಿ ಪ.ಪೂ. ಕಾಲೇಜಿನ ಆಸ್ಟ್ರೋ ಟರ್ಫ್ ಮೈದಾನದಲ್ಲಿ ಇಂದು ಅತಿಥೇಯ ಕಾಲ್ಸ್ ಹಾಗೂ ಅರುವತ್ತೊಕ್ಕಲು ವಿದ್ಯಾನಿಕೇತನ ಪ.ಪೂ. ಕಾಲೇಜುಗಳ ನಡುವೆ ಜರುಗಿದ 18 ವಯೋಮಿತಿ ಯೊಳಗಿನ ‘ದಿ ಮಾಸ್ಟರ್ಸ್ ಕಪ್’ ಫೈನಲ್ಸ್ ನಲ್ಲಿ ವಿದ್ಯಾನಿಕೇತನ ಶಾಲೆಯು 2-1 ಗೋಲುಗಳಿಂದ ಗೆದ್ದು ಪ್ರಥಮ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಅಶ್ವಿನಿ ಕ್ರೀಡಾ ಪ್ರತಿಷ್ಠಾನದ ಆಶ್ರಯದಲ್ಲಿ ಮನೆಯಪಂಡ ಎನ್ ಕರುಂಬಯ್ಯ (ಜಾಕಿ ಮಾಸ್ಟರ್) ಸ್ಮರಣಾರ್ಥ ಜರುಗಿದ 4 ನೇ ವರ್ಷದ ‘ದಿ ಮಾಸ್ಟರ್ಸ್ ಕಪ್’ ಫೈನಲ್ಸ್ ನಲ್ಲಿ ವಿದ್ಯಾನಿಕೇತನ ಶಾಲೆಯ ಗೋಲಿ ಕವಿನ್ ಸುಬ್ಬಯ್ಯ ಅವರ ರಕ್ಷಣಾ ಆಟದ ನೆರವಿನೊಂದಿಗೆ ಬಲಿಷ್ಠ ಕಾಲ್ಸ್ ಶಾಲೆಯನ್ನು ಸೋಲಿಸುವಲ್ಲಿ ಯಶಸ್ವಿಯಾಯಿತು.

ವಿದ್ಯಾನಿಕೇತನದ ಗೋಲಿ ಕವಿನ್, ಸುಮಾರು 5/6 ಖಚಿತ ಗೋಲಾಗುವ ದನ್ನು ತಡೆದು ಮಿಂಚಿದರು.

ಪಂದ್ಯಾಟದ 10 ನೇ ನಿಮಿಷ ವಿದ್ಯಾನಿಕೇತನ ಶಾಲೆಯ ಪ್ರಧಾನ್ ಆಕರ್ಷಕ ಫೀಲ್ಡ್ ಗೋಲು ಮೂಲಕ 1-0 ಮುನ್ನಡೆ ಒದಗಿಸಿದರು. ಆದರೆ, ಮರು ನಿಮಿಷವೇ ಕಾಲ್ಸ್‍ನ ನಾಯಕ (11ನೇ ನಿಮಿಷ) ಏಕಾಂಗಿಯಾಗಿ ಚೆಂಡನ್ನು ಹಿಡಿತಕ್ಕೆ ತೆಗೆದುಕೊಂಡು ರಿವರ್ಸ್ ಫ್ಲಿಕ್ ಮೂಲಕ ಗೋಲು ಹೊಡೆದು ಸ್ಕೋರು 1-1 ಸಮನಾಗಿಸಿದರು. ಮೊದಲಾರ್ಧದಲ್ಲಿ ಚೆಂಡು ಬಹುತೇಕ ಕಾಲ್ಸ್ ಆಟಗಾರರ ಹಿಡಿತದಲ್ಲಿ ಇದ್ದರೂ ವಿದ್ಯಾನಿಕೇತನ ಶಾಲಾ ತಂಡದ ರಕ್ಷಣಾತ್ಮಕ ಆಟದ ಎದುರು ಹಲವು ಗೋಲಾಗುವ ಅವಕಾಶ ವ್ಯರ್ಥವಾಯಿತು.

ಪಂದ್ಯಾಟದ 29 ನೇ ನಿಮಿಷ ವಿದ್ಯಾನಿಕೇತನದ ಜಗತ್ ಪೆನಾಲ್ಟಿ ಕಾರ್ನರ್ ಮೂಲಕ ವಿಜಯದ ಗೋಲು ಬಾರಿಸಿದರು. ವಿದ್ಯಾನಿಕೇತನ 2-1 ಗೋಲುಗಳಿಂದ ಜಯಗಳಿಸಿತು. ಕಾಲ್ಸ್ ತಂಡಕ್ಕೆ ಒಟ್ಟು 11 ಪೆನಾಲ್ಟಿ ಕಾರ್ನರ್ ದೊರೆತರೂ ಗೋಲು ಗಳಿಸುವಲ್ಲಿ ವಿಫಲವಾಯಿತು. ವಿದ್ಯಾನಿಕೇತನ ತಂಡಕ್ಕೆ ಕೇವಲ ಮೂರು ಪೆನಾಲ್ಟಿ ಕಾರ್ನರ್ ಅವಕಾಶ ದಲ್ಲಿ ಒಂದನ್ನು ಗೋಲಾಗಿಸುವಲ್ಲಿ ಸಫಲವಾಯಿತು.

ವಿದ್ಯಾನಿಕೇತನ ತರಬೇತುದಾರ ರಾಗಿ ನವೀನ್ ಹಾಗೂ ಕಾಲ್ಸ್‍ನ ಹಾಕಿ ಕೋಚ್ ಆಗಿ ಚೇತನ್ ಕಾರ್ಯನಿರ್ವಹಿಸಿದರು.

ಗೆದ್ದ ವಿದ್ಯಾನಿಕೇತನ ತಂಡ ರೂ.30 ಸಾವಿರ ನಗದು ಮತ್ತು ಒಂದು ಪರ್ಯಾಯ ಪಾರಿತೋಷಕ ಮತ್ತು ಟ್ರೋಫಿ ಗೆದ್ದುಕೊಂಡಿತು. ರನ್ನರ್ಸ್ ತಂಡ ಕಾಲ್ಸ್ ರೂ.20 ಸಾವಿರ ನಗದು ಮತ್ತು ಟ್ರೋಫಿ ಗೆದ್ದುಕೊಂಡಿತು.

ವಿದ್ಯಾನಿಕೇತನದ ಕವಿನ್ ಸುಬ್ಬಯ್ಯ ಅತ್ಯುತ್ತಮ ಗೋಲ್‍ಕೀಪರ್, ಪ್ರತಿಕ್ ಪೂವಣ್ಣ ಅತ್ಯುತ್ತಮ ಡಿಫೆಂಡರ್ ಪ್ರಶಸ್ತಿ ಗಳಿಸಿದರೆ, ಕಾಲ್ಸ್‍ನ ಪ್ರತೀಕ್ ಅತ್ಯುತ್ತಮ ಮಿಡ್ ಫೀಲ್ಡರ್ ಮತ್ತು ನಾಯಕ ಕುಶಾಲಪ್ಪ ಅತ್ಯುತ್ತಮ ಸ್ಟ್ರೈಕರ್ ಪ್ರಶಸ್ತಿ ಗೆದ್ದುಕೊಂಡರು. ಎಲ್ಲರಿಗೂ ತಲಾ ರೂ.3 ಸಾವಿರ ನಗದು ನೀಡಲಾಯಿತು.

ಸೋಲನ್ನು ಸವಾಲಾಗಿ ಸ್ವೀಕರಿಸಿ: ಡಾ. ಜಿ. ಕಿಶೋರ್

ಭಾರತೀಯ ಕ್ರೀಡಾ ಪ್ರಾಧಿಕಾರದ ಪ್ರಾದೇಶಿಕ ಮುಖ್ಯಸ್ಥ ಡಾ.ಜಿ.ಕಿಶೋರ್ ಅವರು ಮಾತನಾಡಿ, ಎರಡೂ ತಂಡಗಳು ಅತ್ಯುತ್ತಮ ಪ್ರದರ್ಶನ ನೀಡಿದ್ದೀರಿ. ಕ್ರೀಡೆಯಲ್ಲಿ ಸೋಲು ಗೆಲವು ಸಾಮಾನ್ಯ. ಸೋಲನ್ನು ಸವಾಲಾಗಿ ಸ್ವೀಕರಿಸಿ ಎಂದು ಕಿವಿಮಾತು ಹೇಳಿದರು.

ಇಂದು ಫೈನಲ್ ಪಂದ್ಯಕ್ಕೆ ಅತಿಥಿಗಳಾಗಿ ಮಾಜಿ ಒಲಂಪಿಯನ್ ಬಿ.ಕೆ. ಸುಬ್ರಮಣಿ, ಮಾಜಿ ಹಾಕಿ ವಲ್ರ್ಡ್ ಕಪ್ ಆಟಗಾರ ಕೂತಂಡ ಪೂಣಚ್ಚ, ಭಾರತ ಹಾಕಿ ತಂಡದ ರಾಷ್ಟ್ರೀಯ ಕೋಚ್ ಬಿ.ಜೆ. ಕಾರ್ಯಪ್ಪ ಆಗಮಿಸಿದ್ದರು.

ಅಶ್ವಿನಿ ಕ್ರೀಡಾ ಪ್ರತಿಷ್ಠಾನದ ಮುಖ್ಯಸ್ಥೆ ಅಶ್ವಿನಿ ನಾಚಪ್ಪ, ಮಾಜಿ ಅಂತರಾಷ್ಟ್ರೀಯ ಅಥ್ಲಿಟ್ ಪುಷ್ಪಾ, ಕಾಲ್ಸ್ ನ ಮುಖ್ಯಸ್ಥ ದತ್ತಾ ಕರುಂಬಯ್ಯ, ಪ್ರಾಂಶುಪಾಲರಾದ ಗೌರಮ್ಮ ನಂಜಪ್ಪ, ವಿದ್ಯಾನಿಕೇತನ ಪ್ರಾಂಶುಪಾಲ ಹರೀಶ್ ತಮನ್‍ಕರ್ ಉಪಸ್ಥಿತರಿದ್ದರು. ವೀಕ್ಷಕ ವಿವರಣೆ ಯನ್ನು ರಾಷ್ಟ್ರೀಯ ತೀರ್ಪುಗಾರ ಚೆಪ್ಪುಡಿರ ಕಾರ್ಯಪ್ಪ, ಕಾವೇರಿ ಚಂಗಪ್ಪ, ನೀತು ಕಾವೇರಮ್ಮ ನಿರ್ವಹಿಸಿದರು. ಡಾ.ಜಿ.ಕಿಶೋರ್, ಮೀನಾ ಸುಬ್ಬಯ್ಯ, ರಾಜಾ ತಿಮ್ಮಯ್ಯ ಮುಂತಾದವರು ವಿಜೇತರಿಗೆ ಬಹುಮಾನ ವಿತರಿಸಿದರು.

-ವರದಿ: ಟಿ.ಎಲ್. ಶ್ರೀನಿವಾಸ್