ಮಡಿಕೇರಿ, ಡಿ. 7: ಜಿಲ್ಲೆಯ ಪ್ರಮುಖ ಹಬ್ಬಗಳಲ್ಲಿ ಒಂದಾಗಿರುವ ಹುತ್ತರಿ ಆಚರಣೆಗೆ ಸಂಬಂಧಿಸಿದಂತೆ ಈಗಾಗಲೇ ಸಂಪ್ರದಾಯದಂತೆ ಶ್ರೀ ಪಾಡಿ ಇಗ್ಗುತಪ್ಪ ಸನ್ನಿಧಿಯಲ್ಲಿ ಸಮಯ ನಿಗದಿಯಾಗಿದೆ. ತಾ. 11ರಂದು ರಾತ್ರಿ ಹುತ್ತರಿ ಆಚರಣೆ ಜರುಗಲಿದೆ. ಪಾಡಿಯಲ್ಲಿ ಸಮಯ ನಿಗದಿಯಂತೆ ದಕ್ಷಿಣ ಕೊಡಗಿನ ಹಲವೆಡೆಗಳಲ್ಲಿ ಈ ಹಿಂದಿನಂತೆ ಬೆಳಿಗ್ಗೆ ಕದಿರು ತೆಗೆಯುವ ಸಂಪ್ರದಾಯವೂ ಇದ್ದು, ಈ ವ್ಯಾಪ್ತಿಯಲ್ಲಿ ತಿರುನೆಲ್ಲಿ ಪೆಮ್ಮಯ್ಯ ಸನ್ನಿಧಿಯ ಕಟ್ಟುಪಾಡಿನಂತೆ ಕದಿರು ತೆಗೆಯಲಾಗುತ್ತದೆ. ಇದರಂತೆ ಈ ಬಾರಿ ಬೆಳಿಗ್ಗೆ ಕದಿರು ತೆಗೆಯುವ ಸಂಪ್ರದಾಯ ಇರುವಲ್ಲಿ ತಾ. 12ರಂದು ಬೆಳಿಗ್ಗೆ 10.30ಕ್ಕೆ ರೋಹಿಣಿ ನಕ್ಷತ್ರದ ಶುಭ ಗಳಿಗೆಯಲ್ಲಿ ಕದಿರು ತೆಗೆಯಹುದಾಗಿದೆ ಎಂದು ಬಲ್ಯಮುಂಡೂರು ಗ್ರಾಮದ ಮಾಚಿಮಂಡ ಕುಟುಂಬದ ಅಧ್ಯಕ್ಷ ಡಾಲಿ ಮಂದಣ್ಣ ಮಾಹಿತಿ ನೀಡಿದ್ದಾರೆ.