ಮಡಿಕೇರಿ, ಡಿ. 7: ಕೊಡವ ಮಕ್ಕಡ ಕೂಟ ಅಧ್ಯಯನ ಗ್ರಂಥಗಳಿಗೆ ಮಹತ್ವ ನೀಡಿ, ಅದನ್ನು ಪುಸ್ತಕ ರೂಪದಲ್ಲಿ ಹೊರತರುತ್ತಿರುವ ಕಾರ್ಯ ಮಾಡುತ್ತಿರುವದು ಶ್ಲಾಘನೀಯ ಬೆಳವಣಿಗೆ ಎಂದು ಹುದಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೋದಂಡ ಸನ್ನು ಉತ್ತಪ್ಪ ಹೇಳಿದರು.

ಕೊಡವ ಮಕ್ಕಡ ಕೂಟ ಹಾಗೂ ಹುದಿಕೇರಿ ಕೊಡವ ಸಮಾಜದ ಸಹಯೋಗದಲ್ಲಿ ಹುದಿಕೇರಿ ಕೊಡವ ಸಮಾಜದಲ್ಲಿ ನಡೆದ ಬರಹಗಾರ್ತಿ ಕಾಡ್ಯಮಾಡ ರೀಟಾ ಬೋಪಯ್ಯ ಅವರ ಮಹಾವೀರ ಅಚ್ಚುನಾಯಕ ಪುಸ್ತಕ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಅಧ್ಯಯನ ಗ್ರಂಥಗಳು ನಿರಂತರವಾಗಿ ಹೊರಬರಬೇಕಿದೆ ಎಂದು ಅವರು ಆಶಿಸಿದರು. ಲೇಖಕಿ ಕಾಡ್ಯಮಾಡ ರೀಟಾ ಬೋಪಯ್ಯ ಮಾತನಾಡಿ, ಕೊಡವ ಮಕ್ಕಡ ಕೂಟದಿಂದ ಈ ಹಿಂದೆ ಕೊಡವ ಭಾಷೆಯಲ್ಲಿ ಬಿಡುಗಡೆಗೊಳಿಸಲಾದ ಪುಸ್ತಕವನ್ನು ಇದೀಗ ಕನ್ನಡ ಭಾಷೆಗೆ ಭಾಷಾಂತರಗೊಳಿಸಿ ಬಿಡುಗಡೆ ಗೊಳಿಸಲಾಗಿದೆ ಎಂದು ವಿವರಿಸಿದರು. ಹುದಿಕೇರಿ ಕೊಡವ ಸಮಾಜದ ಗೌರವ ಕಾರ್ಯದರ್ಶಿ ಮಂಡಂಗಂಡ ಅಶೋಕ್ ಮಾತನಾಡಿ, ಮಹಾವೀರ ಅಚ್ಚುನಾಯಕ ಹುದಿಕೇರಿ ಭಾಗದ ಐದು ಊರಿಗೆ ಸೇರಿದ ವ್ಯಕ್ತಿ. ಇಂತಹ ವ್ಯಕ್ತಿಯ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಹುದಿಕೇರಿ ಕೊಡವ ಸಮಾಜದಲ್ಲಿ ಹಮ್ಮಿಕೊಂಡಿರುವದು ಸಂತೋಷದ ವಿಷಯ ಎಂದು ಮೆಚ್ಚುಗೆ ಸೂಚಿಸಿದರು.

ಅತಿಥಿಗಳಾಗಿ ಪಾಲ್ಗೊಂಡಿದ್ದ ಸಮಾಜ ಸೇವಕ ಅಜ್ಜಿಕುಟೀರ ಭೀಮಯ್ಯ ಮಾತನಾಡಿ, ಮಹಾವೀರ ಅಚ್ಚುನಾಯಕ ಮಾಡಿದ ಸಾಧನೆಗಳನ್ನು ಗುರುತಿಸುವ ಕಾರ್ಯವಾಗಬೇಕು. ಇಂದಿನ ಯುವ ಸಮಾಜದ ಇವರ ಆದರ್ಶ ಗುಣಗಳನ್ನು ಬೆಳೆಸಿಕೊಂಡು, ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು ಎಂದರು.

ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ ಅಯ್ಯಪ್ಪ ಮಾತನಾಡಿ, ಕೊಡವ ಮಕ್ಕಡ ಕೂಟದ ವತಿಯಿಂದ 35ನೇ ಪುಸ್ತಕವನ್ನು ಲೋಕಾರ್ಪಣೆಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.

ಹುದಿಕೇರಿ ಕೊಡವ ಸಮಾಜದ ಮಾಜಿ ಅಧ್ಯಕ್ಷ, ಅರಣ್ಯ ನಿಗಮ ಮಂಡಳಿ ಮಾಜಿ ನಿರ್ದೇಶಕ ಚೆಕ್ಕೇರ ವಾಸು ಕುಟ್ಟಪ್ಪ, ಕಾರ್ಯಕ್ರಮದ ಸಂಚಾಲಕ ಹಾಗೂ ಕೊಡವ ಮಕ್ಕಟ ಕೂಟದ ಉಪಾಧ್ಯಕ್ಷ ಬಾಳೆಯಡ ಪ್ರತೀಶ್ ಪೂವಯ್ಯ, ಕೊಡಗ್‍ರ ಸಿಪಾಯಿ ಚಿತ್ರದ ನಟ ಬಿದ್ದಂಡ ಉತ್ತಮ್ ಪೊನ್ನಪ್ಪ, ಚಿತ್ರ ವಿತರಕರಾದ ಅಚಿಯಂಡ ಗಗನ್ ಗಣಪತಿ ಹಾಜರಿದ್ದರು.

ಕಾರ್ಯಕ್ರಮದಲ್ಲಿ ಕೊಡವ ಮಕ್ಕಡ ಕೂಟದಿಂದ ಸಮಾಜ ಸೇವಕ ಅಜ್ಜಿಕುಟ್ಟೀರ ಭೀಮಯ್ಯ ಹಾಗೂ ಲೇಖಕಿ ಕಾಡ್ಯಮಾಡ ರೀಟಾ ಬೋಪಯ್ಯ ಅವರನ್ನು ಸನ್ಮಾನಿಸಲಾಯಿತು. ಹುದಿಕೇರಿ ಲಿಟ್ಲ್ ಫ್ಲವರ್ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಹುದಿಕೇರಿ ಕೊಡವ ಸಮಾಜದ ವ್ಯವಸ್ಥಾಪಕ ಕಿರಿಯಮಡ ರಾಜ್ ಕುಶಾಲಪ್ಪ ವಂದಿಸಿದರು. ಬೊಳ್ಳಜಿರ ಅಯ್ಯಪ್ಪ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಚಲನಚಿತ್ರ ಪ್ರದರ್ಶನ: ಸಭಾ ಕಾರ್ಯಕ್ರಮದ ನಂತರ ಬೆಳಿಗ್ಗೆ 11, ಮಧ್ಯಾಹ್ನ 2 ಹಾಗೂ ಸಂಜೆ ಆರು ಗಂಟೆಗೆ ಕೊಡಗ್‍ರ ಸಿಪಾಯಿ ಚಿತ್ರ ಪ್ರದರ್ಶನ ನಡೆಯಿತು.