ಮಡಿಕೇರಿ, ಡಿ. 7: ಕೊಡಗು ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ವತಿಯಿಂದ ಜಿಲ್ಲಾಮಟ್ಟದ ಅಂತರ ಶಾಲಾ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಹಾಗೂ ಜಿಲ್ಲಾ ಮಟ್ಟದ ಷಟಲ್ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್ ಪಂದ್ಯಾವಳಿ ಜ. 3 ರಿಂದ 5 ರವರೆಗೆ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅಸೋಸಿಯೇಷನ್ ಅಧ್ಯಕ್ಷ ಡಾ. ಮೋಹನ್ ಅಪ್ಪಾಜಿ ಅವರು ಜ. 3 ರಂದು ಜಿಲ್ಲೆಯ ಎಲ್ಲಾ ಸಿಬಿಎಸ್‍ಇ, ಐಸಿಎಸ್‍ಇ, ಸರಕಾರಿ ಪ್ರಾಥಮಿಕ, ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ನಗರದ ಜಿಲ್ಲಾ ಕ್ರೀಡಾಂಗಣದ ಒಳಾಂಗಣ ಕ್ರೀಡಾಂಗಣದಲ್ಲಿ ಪಂದ್ಯಾವಳಿ ನಡೆಯಲಿದ್ದು, ಆಸಕ್ತ ಶಾಲಾ ಮುಖ್ಯಸ್ಥರು, ಆಡಳಿತ ಮಂಡಳಿಯವರು ತಮ್ಮ ಶಾಲೆಗಳ ಆಸಕ್ತ ವಿದ್ಯಾರ್ಥಿಗಳು ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಬೇಕೆಂದು ಮನವಿ ಮಾಡಿದರು.

10-13, 13-15, 15-17 ವರ್ಷದೊಳಗಿನವರ ಪಂದ್ಯಾಟವನ್ನು ಫೆದರ್ ಷಟಲ್‍ನಲ್ಲಿ ಮತ್ತು 10 ವರ್ಷ ಮೇಲ್ಪಟ್ಟ ಮಹಿಳೆಯರ ಮತ್ತು ಪುರುಷರ ಪಂದ್ಯಾವಳಿಯನ್ನ ಮಾವಿಸ್-350 ಷಟಲ್‍ನಲ್ಲಿ ನಡೆಸಲಾಗುತ್ತಿದ್ದು, ಶಾಲಾ ವಿದ್ಯಾರ್ಥಿಗಳು ತಮ್ಮ ಆಧಾರ್ ಕಾರ್ಡ್ ತರುವದು ಕಡ್ಡಾಯವಾಗಿದೆ ಎಂದು ಹೇಳಿದರು. ಚಾಂಪಿಯನ್‍ಶಿಪ್‍ನಲ್ಲಿ ವಿಜೇತ ಶಾಲಾ ತಂಡಕ್ಕೆ ವಕೀಲರಾದ ಚೌರಿರ ಮೇದಪ್ಪ ಅವರ ಹೆಸರಿನಲ್ಲಿ ಅವರ ಪತ್ನಿ ಬೊಳ್ಳು ಮೇದಪ್ಪ ಅವರು ಪ್ರಾಯೋಜಿಸಿರುವ ಪರ್ಯಾಯ ಪಾರಿತೋಷಕವನ್ನು ವಿಜೇತ ಶಾಲೆಗಳಿಗೆ ನೀಡಲಾಗುವದು ಎಂದು ಅವರು ತಿಳಿಸಿದರು. 19 ವರ್ಷ ಮೇಲ್ಪಟ್ಟ ಪುರುಷರ ಮತ್ತು ಮಹಿಳೆಯ ಹಾಗೂ ವಯಸ್ಕರ ಪಂದ್ಯಾವಳಿಗಳು ಜ. 4 ಮತ್ತು 5 ರಂದು ನಡೆಯಲಿದ್ದು, ಬಾಲಕ, ಬಾಲಕಿಯರಿಗೆ, ಮಹಿಳೆಯರಿಗೆ, ಪುರುಷರಿಗೆ, 40, 50, ಹಾಗೂ 60 ವರ್ಷ ಮೇಲ್ಪಟ್ಟ ಪುರುಷರಿಗೆ ಸಿಂಗಲ್ ಮತ್ತು ಡಬಲ್ಸ್ ಹಾಗೂ ಓಪನ್ (ಮುಕ್ತ) ಮಿಕ್ಸೆಡ್ ಡಬಲ್ಸ್ ಪಂದ್ಯಾವಳಿಯನ್ನು ನಡೆಸಲಾಗುವದು ಎಂದ ಅವರು, ಭಾಗವಹಿಸುವ ಆಟಗಾರರು ಜ. 1 ರೊಳಗಾಗಿ ತಮ್ಮ ಹೆಸರುಗಳನ್ನು ನೋಂದಾಯಿಸಿ ಕೊಳ್ಳುವಂತೆ ಮನವಿ ಮಾಡಿದರು.

ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗೆ 8792842853, 6364229203 ಸಂಪರ್ಕಿಸಬಹುದು ಎಂದು ಡಾ. ಮೋಹನ್ ಅಪ್ಪಾಜಿ ತಿಳಿಸಿದರು.

ಗೋಷ್ಠಿಯಲ್ಲಿ ಅಸೋಸಿಯೇಷನ್ ಉಪಾಧ್ಯಕ್ಷ ಜೀವನ್, ಕಾರ್ಯದರ್ಶಿ ಡಾ. ಎಂ.ಎ. ದೇವಯ್ಯ, ನಿರ್ದೇಶಕ ರಾದ ಲವಿನ್, ಗಂಗಮ್ಮ ಹಾಗೂ ಶಮ್ಮಿ ಸುಬ್ಬಯ್ಯ ಉಪಸ್ಥಿತರಿದ್ದರು.