ಸುಂಟಿಕೊಪ್ಪ, ಡಿ. 7: ಸಣ್ಣ ವಯಸ್ಸಿನಿಂದಲೂ ಆಟಗಳಲ್ಲಿ ಭಾಗವಹಿಸಿ ದೈಹಿಕ, ಮಾನಸಿಕವಾಗಿ ಸಧೃಡರಾಗಿ ಉತ್ತಮ ಚಾರಿತ್ರ್ಯವನ್ನು ಬೆಳೆಸಿಕೊಳ್ಳಿ ಎಂದು ಮಡಿಕೇರಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಡಾ. ಚೌರೀರ ಜಗತ್ ತಿಮ್ಮಯ್ಯ ಕ್ರೀಡಾಪಟುಗಳಿಗೆ ಕಿವಿಮಾತು ಹೇಳಿದರು.
ಸಮೀಪದ ಮಾದಾಪುರ ಶ್ರೀಮತಿ ಡಿ. ಚೆನ್ನಮ್ಮ ಪದವಿ ಪೂರ್ವ ಕಾಲೇಜಿನ ವಾರ್ಷಿಕ ಕ್ರೀಡೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾಮಾಜಿಕ ಮಾದ್ಯಮದಿಂದ ದೂರವಾಗಿ ಕ್ರೀಡೆಯತ್ತ ಗಮನಹರಿಸಿ ಉತ್ತಮ ಕ್ರೀಡಾಪಟುವಾಗಿ ಮುನ್ನುಗ್ಗಿರಿ. ಕೊಡಗಿನ ರೋಹನ ಬೋಪಣ್ಣ ಇದೇ ಗ್ರಾಮದವರಾಗಿದ್ದು, ಅವರ ಕ್ರೀಡಾಸ್ಪೂರ್ತಿಯನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕಾಗಿದೆ. ಕ್ರೀಡೆಯಿಂದ ಶಿಸ್ತು, ಸಂಯಮ, ಒಳ್ಳೆಯ ಮನಸ್ಸು ಹಾಗೂ ಒಳ್ಳೆಯ ವ್ಯಕ್ತಿಯಾಗಲು ಸಾಧ್ಯ. ಇತ್ತಿಚಿನ ದಿನಗಳಲ್ಲಿ ಬೇರೆ ಬೇರೆ ಸಮೂದಾಯದವರು ತಮ್ಮೊಳಗಿನ ಕ್ರೀಡಾ ಪ್ರತಿಭೆಗಳನ್ನು ಹೊರಹಾಕಲು ಕ್ರಿಕೆಟ್, ಕಬಡ್ಡಿ, ಹಾಕಿ, ಫುಟ್‍ಬಾಲ್ ನಂತಹ ಕ್ರೀಡಾಕೂಟಗಳನ್ನು ನಡೆಸಿ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ನಿವೃತ್ತ ಕರ್ನಲ್ ಬಿ.ಜಿ.ವಿ. ಕುಮಾರ್ ಅವರು, ಕ್ರೀಡಾಕೂಟಗಳಲ್ಲಿ ಪ್ರತಿಯೊಬ್ಬರೂ ಭಾಗವಹಿಸುವದು ಮುಖ್ಯ. ಸೋಲು-ಗೆಲುವು ಸರ್ವೇ ಸಾಮಾನ್ಯ, ಎಲ್ಲರೂ ಗೆಲುವಿಗಾಗೆಯೇ ಸಂತೋಷದಿಂದ, ಕ್ರೀಡಾ ಮನೋಭಾವದಿಂದ ಆಟವಾಡಿ ಎಂದು ಶುಭ ಹಾರೈಸಿದರು.
ವೇದಿಕೆಯಲ್ಲಿ ಕಾಲೇಜಿನ ಪ್ರಾಚಾರ್ಯ ಮಂದಪ್ಪ, ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಎನ್.ಎ. ರೇವತಿ, ಎಜುಕೇಶನ್ ಸೊಸೈಟಿಯ ನಿರ್ದೇಶಕರುಗಳಾದ ಸಿ.ಪಿ. ಮುದ್ದಪ್ಪ, ಕೆ.ಎಸ್. ಪ್ರಕಾಶ್, ಸೀತಾ ಚಿಟ್ಟಿಯಪ್ಪ, ಎಂ.ಸಿ. ಬೋಜಮ್ಮ, ಕೆ.ಎಸ್. ಮಂಜುನಾಥ್, ಅಜಿತ್ ಅಪ್ಪಚ್ಚು, ಪಿ.ಎನ್. ಮೋಹನ್, ಎಂ.ಈ. ಜಾನಕಿ, ನಿವೃತ್ತ ಡಿಸಿಪಿ ಬಿ.ಎ. ಪೂಣಚ್ಚ ಇತರರು ಇದ್ದರು.