ಕುಶಾಲನಗರ, ಡಿ. 7: ಆಸ್ತಿ ವಿಷಯದ ವೈಷಮ್ಯದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ತಮ್ಮನ ಪತ್ನಿಯನ್ನು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ ಘಟನೆ ಕುಶಾಲನಗರ ಸಮೀಪ ರಂಗಸಮುದ್ರ ಗ್ರಾಮದಲ್ಲಿ ನಡೆದಿದೆ. ರಂಗಸಮುದ್ರದ ಉಳುವಾರನ ಸುಬ್ಬಯ್ಯ ಎಂಬವರ ಪುತ್ರ ವಿಪಿನ್ ಕುಮಾರ್ ತನ್ನ ಸಹೋದರ ರಂಜಿತ್ ಪತ್ನಿ ಜಲಜಾಕ್ಷಿ ಎಂಬಾಕೆಯನ್ನು ಕೊಲೆ ಮಾಡಿ ಪರಾರಿಯಾಗಿರುವದಾಗಿ ತಿಳಿದುಬಂದಿದೆ.ಆರೋಪಿ ವಿಪಿನ್ ಕುಮಾರ್ ರಂಗಸಮುದ್ರದಲ್ಲಿ ಒಂದು ಎಕರೆ ವಿಸ್ತೀರ್ಣದ ತೋಟದೊಂದಿಗೆ ರಸ್ತೆ ಬದಿಯ ಅಂಗಡಿಯಲ್ಲಿ ಸಣ್ಣ ಪುಟ್ಟ ವ್ಯಾಪಾರ ಮಾಡುತ್ತಿದ್ದು, ಆಸ್ತಿ ವಿಷಯದಲ್ಲಿ ಸಹೋದರರ ನಡುವೆ ಭಿನ್ನಾಭಿಪ್ರಾಯ ಇತ್ತು ಎನ್ನಲಾಗಿದೆ.ಮೂಲತಃ ಮರಗೋಡು ಗ್ರಾಮದ ಜಲಜಾಕ್ಷಿ ಎಂಬಾಕೆಯನ್ನು ರಂಜಿತ್ ವಿವಾಹವಾಗಿದ್ದು, ಜಲಜಾಕ್ಷಿ ಅಮ್ಮತ್ತಿ ಪಂಚಾಯ್ತಿ ಗ್ರಂಥಾಲಯದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಮರಗೋಡಿನ ತವರು ಮನೆಯಲ್ಲಿ ನೆಲೆಸಿದ್ದ ಜಲಜಾಕ್ಷಿ ಅವರ ಪತಿ ಚಾಲಕ ವೃತ್ತಿಯಲ್ಲಿದ್ದು ಅಪರೂಪಕ್ಕೆ ರಂಗಸಮುದ್ರ ಮನೆಗೆ ಬಂದು ಹೋಗುತ್ತಿದ್ದರು ಎಂದು ಕುಟುಂಬ ಮೂಲದವರು ತಿಳಿಸಿದ್ದು ಎಂದಿನಂತೆ ಶನಿವಾರ ರಂಗಸಮುದ್ರಕ್ಕೆ ಬಂದ ಜಲಜಾಕ್ಷಿಯೊಂದಿಗೆ ಆರೋಪಿ ವಿಪಿನ್ ಕುಮಾರ್ ಜಗಳ ತೆಗೆದಿದ್ದಾನೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಮನೆಯಲ್ಲಿದ್ದ ನೇಗಿಲಿನ ಹಿಡಿಯಲ್ಲಿ ಜಲಜಾಕ್ಷಿ ಅವರ ತಲೆಗೆ ಹೊಡೆದಿದ್ದು ತೀವ್ರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿರುವದಾಗಿ ಪೊಲೀಸರು ತಿಳಿಸಿದ್ದಾರೆ. ಮೃತ ಮಹಿಳೆಗೆ ಮಕ್ಕಳಿರಲಿಲ್ಲ. ತನ್ನ ಸಹೋದರನ ಪುತ್ರನನ್ನು ಸಾಕುತ್ತಿದ್ದರು.

ಘಟನೆ ನಂತರ ಆರೋಪಿ ಪರಾರಿಯಾಗಿದ್ದು ತಡ ರಾತ್ರಿ ಕುಶಾಲನಗರ ಗ್ರಾಮಾಂತರ ಪೊಲೀಸರು ಆರೋಪಿ ವಿಪಿನ್ ಕುಮಾರನನ್ನು ಬಂಧಿಸಿದ್ದಾರೆ.

(ಮೊದಲ ಪುಟದಿಂದ)

ಅನಾಥವಾದ ಮಗು

ಕೊಲೆಯಾದ ಜಲಜಾಕ್ಷಿ ಸಾವಿನ ಸುದ್ದಿ ಕೇಳಿ ದೌಡಾಯಿಸಿದ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಆಕೆಯ ಸಾವಿನೊಂದಿಗೆ ಈ ದಂಪತಿಗಳು ಸಾಕುತ್ತಿದ್ದ ತಮ್ಮನ ಮಗುವಿನ ಬಗ್ಗೆ ರೋಧಿಸುತ್ತಿದ್ದರು.

ಕೊಲೆಯಾದ ಜಲಜಾಕ್ಷಿಯ ತಮ್ಮ ಬಿಂಧುಸಾರನ ಹೆಂಡತಿ ಮಗುವಿಗೆ ಜನ್ಮ ನೀಡುವ ವೇಳೆ ಮೃತಪಟ್ಟಿದ್ದಳು. ಮಗುವನ್ನು ನೋಡಿಕೊಳ್ಳುವದಕ್ಕಾಗಿ ಬಿಂಧುಸಾರ ಮರು ಮದುವೆ ಯಾಗಿದ್ದ. ಮಗು ಬೆಳೆದು 6ನೇ ತರಗತಿ ತಲಪುತ್ತಿದಂತೆ ಇತ್ತೀಚೆಗೆ ಬಿಂದುಸಾರನ ಎರಡನೇ ಪತ್ನಿ ಕೂಡ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಬಾಲಕನ ತಂದೆ ಬಿಂಧುಸಾರ ಕೂಡ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದ. ಮಗು ಮತ್ತೆ ಅನಾಥವಾಗಿದನ್ನು ಕಂಡ ಜಲಜಾಕ್ಷಿ ತನಗೆ ಮಕ್ಕಳಿಲ್ಲದ ಹಿನ್ನೆಲೆಯಲ್ಲಿ ಮಗುವನ್ನು ತಾನು ಸಾಕಲು ಮುಂದಾಗಿದ್ದಳು.

ಇದೀಗ ಬಾಲಕ ಮತ್ತೆ ತನ್ನವರು ಎಂದು ಹೇಳಿಕೊಳ್ಳಲು ಯಾರೂ ಇಲ್ಲದೇ ಅನಾಥವಾಗಿದ್ದಾನೆ.

- ಚಂದ್ರಮೋಹನ್/ಅಂಚೆಮನೆ ಸುಧಿ