ಗೋಣಿಕೊಪ್ಪಲು, ಡಿ. 7: ಸಾಧಕರಿಗೆ ಕನಸುಗಳು ನೂರಾರು.ಆದರೆ,ತಮ್ಮ ಜೀವಿತಾವಧಿಯಲ್ಲಿ ಎಲ್ಲ ಕನಸುಗಳನ್ನೂ ನನಸು ಮಾಡಿಕೊಳ್ಳುವದು ಕಷ್ಟ ಸಾಧ್ಯ. ಗೋಣಿಕೊಪ್ಪಲಿನಲ್ಲಿ ಅಶ್ವಿನಿ ಕ್ರೀಡಾ ಪ್ರತಿಷ್ಠಾನದ ಮೂಲಕ ಸುಮಾರು ರೂ. 10 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಕೆಂಪು ಬಣ್ಣದ ಸಿಂಥೆಟಿಕ್ ಅಥ್ಲೆಟಿಕ್ ಮೈದಾನ ಅಂತರರಾಷ್ಟ್ರೀಯ ಗುಣಮಟ್ಟದ ಮೈದಾನವಾಗಿ ರೂಪುಗೊಂಡಿದೆ. ರಾಜ್ಯದ ಕೆಲವೇ ಜಿಲ್ಲೆಗಳಲ್ಲಿ ಇಂತಹಾ ಮೈದಾನ ನೋಡಬಹುದಾದರೂ ಅಶ್ವಿನಿ ನಾಚಪ್ಪ ಅವರು ತುಂಬ ಆಸಕ್ತಿವಹಿಸಿ, ಸ್ಪ್ರಿಂಟರ್‍ಗೆ ಪುಟಿಯುವ ಹಾಗೆ (ಬೌನ್ಸ್) ಉತ್ತಮವಾದ ಟ್ರ್ಯಾಕ್ ನಿರ್ಮಾಣ ಮಾಡಿದ್ದಾರೆ. ಗೋಣಿಕೊಪ್ಪಲು ಕಾಲ್ಸ್ ಶಾಲಾ ಆವರಣದಲ್ಲಿ ನಿರ್ಮಾಣವಾದ ಮೈದಾನಕ್ಕೆ ಕೇಂದ್ರ ಕ್ರೀಡಾ ಮಂತ್ರಾಲಯ ರೂ.5 ಕೋಟಿ ಅನುದಾನ ಒದಗಿಸಿದೆ. ಭಾರತದ ಹಲವು ಸಿಂಥೆಟಿಕ್ ಅಥ್ಲೆಟಿಕ್ ಟ್ರ್ಯಾಕ್‍ನಲ್ಲಿ ಭಾಗವಹಿಸಿದ ಕ್ರೀಡಾಪಟುಗಳನ್ನು ಇಲ್ಲಿ ಓಡಿದ ನಂತರ ವಿಚಾರಿಸಿದಾಗ ಇದೊಂದು ಅಂತರರಾಷ್ಟ್ರೀಯ ಗುಣಮಟ್ಟದ ಉತ್ತಮ ಮೈದಾನ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮೈದಾನ ನಿರ್ಮಾಣವಾಗಿ 5ನೇ ವರ್ಷಕ್ಕೆ ಪದಾರ್ಪಣೆ ಮಾಡಿದ್ದು, ಅಶ್ವಿನಿ ಕ್ರೀಡಾ ಪ್ರತಿಷ್ಠಾನದ ಮೂಲಕ ಕಳೆದ 4 ವರ್ಷಗಳಿಂದ ಬೇಸಿಗೆ ಶಿಬಿರ ಒಳಗೊಂಡಂತೆ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಪೆÇ್ರೀತ್ಸಾಹಿಸಲು ಹಲವಾರು ಸ್ಪರ್ಧೆಗಳು ನಡೆದಿವೆ.ಇವುಗಳಲ್ಲಿ ಕಳೆದ ವರ್ಷ ಆರಂಭಗೊಂಡ ಎಎಸ್‍ಎಫ್ (ಅಶ್ವಿನಿ ಸ್ಪೋಟ್ರ್ಸ್ ಫೌಂಡೇಶನ್) ಸ್ಕೂಲ್ ಟ್ರ್ಯಾಕ್ ಮತ್ತು ಫೀಲ್ಡ್ ಚಾಂಪಿಯನ್‍ಶಿಫ್ ಗ್ರಾಮೀಣ ಪ್ರತಿಭೆಗಳ ಅನಾವರಣಕ್ಕೆ ಉತ್ತಮ ವೇದಿಕೆಯಾಗಿದೆ. ಕಳೆದ ವರ್ಷ 247 ರಷ್ಟಿದ್ದ ಕ್ರೀಡಾ ಪಟುಗಳ ಸಂಖ್ಯೆ ಈ ಬಾರಿ 650ಕ್ಕೂ ಅಧಿಕವಾಗಿದೆ. ಮುಂದಿನ ವರ್ಷ ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಉದ್ಧೇಶಿತ ಮೈದಾನದಲ್ಲಿ ‘ಅತಿವೇಗದ ಓಟಗಾರ’ ಚಾಂಪಿಯನ್‍ಗಳಾಗಿ ಹೊರ ಹೊಮ್ಮಲು ಪೈಪೆÇೀಟಿ ನಡೆಸುವ ಸಾಧ್ಯತೆ ಇದೆ. ಇದು ಕ್ರೀಡಾತಾರೆ ಅಶ್ವಿನಿ ನಾಚಪ್ಪ ಅವರ ಕನಸು ನನಸು ಮಾಡಿಕೊಳ್ಳುತ್ತಿರುವದರ ಅಂಕಿ ಅಂಶ ಏರುಮುಖದ ಪ್ರಮಾಣ.
ಗೋಣಿಕೊಪ್ಪಲು ಸಮೀಪ ಕೈಕೇರಿ ಗ್ರಾಮದಲ್ಲಿ 12 ವರ್ಷಗಳ ಹಿಂದೆ ಸುಮಾರು 28 ಎಕರೆ ಪ್ರದೇಶವನ್ನು ಖರೀದಿ ಮಾಡಿ ‘ಇಲ್ಲೊಂದು ಶಾಲೆ ಕಟ್ಟುತ್ತೇನೆ. ಕಲಿಕೆಯೊಂದಿಗೆ ಕ್ರೀಡೆಯನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತೇನೆ’ ಎಂದು ಹೇಳಿದಾಗ ಹಲವರು ‘ಇದು ಆಗುತ್ತಾ ಹೋಗುತ್ತಾ’ ಅಂತೆಲ್ಲಾ ಗೇಲಿ ಮಾಡಿದ್ದರು. ಆದರೆ, ಟೀಕೆಯನ್ನು ಕ್ರೀಡಾ ಮನೋಭಾವದಿಂದಲೇ ಸ್ವೀಕರಿಸಿದ ದತ್ತಾ ಕರುಂಬಯ್ಯ ಮತ್ತು ಅಶ್ವಿನಿ ನಾಚಪ್ಪ ದಂಪತಿ ಇದೀಗ ಅಂತರ್ರಾಷ್ಟ್ರೀಯ ಕ್ರೀಡಾ ತಾರೆಗಳೇ ಹುಬ್ಬೇರಿಸುವಂತೆ 28 ಎಕರೆಯ ಪುಟ್ಟ ಕ್ರೀಡಾ ಗ್ರಾಮವನ್ನು ಅಲ್ಲಿ ನಿರ್ಮಾಣ ಮಾಡಿರುವದು ವಿಶೇಷ. ಹಾಕಿ ಮೈದಾನ, ಫುಟ್‍ಬಾಲ್ ಮೈದಾನ, ಶೂಟಿಂಗ್ ರೇಂಜ್, ಬಹುಪಯೋಗಿ ಸಿಂಥೆಟಿಕ್ ಅಥ್ಲೆಟಿಕ್ ಕೋರ್ಟ್, ಲಾಂಗ್ ಜಂಪ್ ಫೀಲ್ಡ್, ಸ್ವಿಮ್ಮಿಂಗ್ ಫೂಲ್, ಜಿಮ್ನಾಸ್ಟಿಕ್ ಸೆಂಟರ್, ಕ್ರಿಕೆಟ್ ಪಿಚ್, ಶಾಟ್ ಪುಟ್, ಪೆÇೀಲ್ ವಾಲ್ಟ್ ಇತ್ಯಾದಿ ವ್ಯವಸ್ಥಿತ ನಿರ್ಮಾಣವನ್ನು ಅಲ್ಲಿ ಕಣ್ಣುತುಂಬಿಕೊಳ್ಳಬಹುದು. ವಿದ್ಯಾರ್ಥಿಗಳಲ್ಲಿ ಧಾರ್ಮಿಕ ಮನೋಭಾವನೆ ಬೆಳೆಸಲು ಅಲ್ಲೊಂದು ಸುಂದರ ಸಿದ್ಧಿವಿನಾಯಕನ ದೇವಾಲಯ ನಿರ್ಮಿಸಿ, ವಾರ್ಷಿಕ ಮಹೋತ್ಸವವನ್ನೂ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ.
‘ಕರುಂಬಯ್ಯ ಅಕಾಡೆಮಿ ಫಾರ್ ಲರ್ನಿಂಗ್ ಅಂಡ್ ಸ್ಪೋಟ್ರ್ಸ್’ (ಕಾಲ್ಸ್) ಎಂದು ಆರಂಭಗೊಂಡ ಶಾಲೆಯಲ್ಲಿ ಮಾಂಟೆಸ್ಸರಿ, ಎಲ್.ಕೆ.ಜಿ., ಯು.ಕೆ.ಜಿ., ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜುವರೆಗೆ ಒಟ್ಟು 834 ವಿದ್ಯಾರ್ಥಿಗಳಿದ್ದಾರೆ. ಈ ಪೈಕಿ 320 ವಿದ್ಯಾರ್ಥಿಗಳು ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. 70 ಶಿಕ್ಷಕರು, 80 ಸಿಬ್ಬಂದಿಗಳೊಂದಿಗೆ ಶಾಲೆ ಪಾಠ ಹಾಗೂ ಆಟದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುತ್ತಿದೆ. ಜಪಾನ್, ಮಹಾರಾಷ್ಟ್ರ, ಕಾಶ್ಮೀರ, ಯು.ಎ.ಇ ಅಲ್ಲದೆ, ಕರ್ನಾಟಕದ ಎಲ್ಲ ಜಿಲ್ಲೆಯ ಭಾಗದ ಮಕ್ಕಳು, ನೆರೆಯ ಕೇರಳ, ಆಂಧ್ರ, ತಮಿಳುನಾಡು ಇತ್ಯಾದಿ ಭಾಗಗಳಿಂದ ವಿದ್ಯಾರ್ಜನೆಗಾಗಿ ಬಂದಿರುವದನ್ನು ಕಾಣಬಹುದಾಗಿದೆ.
ಉಚಿತ ತರಬೇತಿ : ಎಎಸ್‍ಎಫ್ ಮೂಲಕ ಇದೀಗ ಸುಮಾರು 25 ವಿದ್ಯಾರ್ಥಿಗಳಿಗೆ ಉಚಿತ ಊಟ, ವಸತಿ, ವಿದ್ಯಾಭ್ಯಾಸ ನೀಡಲಾಗುತ್ತಿರುವದು ಹೆಮ್ಮೆಯ ವಿಚಾರ. ಇವರಲ್ಲಿ ಅಥ್ಲೆಟಿಕ್ಸ್ ನಲ್ಲಿ 10, ಹಾಕಿ-6, ಶೂಟಿಂಗ್ ಒಳಗೊಂಡಂತೆ ವಾರ್ಷಿಕ ಕಾಲ್ಸ್ ಶಾಲೆ ಹಾಗೂ ಅಶ್ವಿನಿ ಕ್ರೀಡಾ ಪ್ರತಿಷ್ಠಾನದ ಮೂಲಕ ರೂ. 60 ಲಕ್ಷಕ್ಕೂ ಅಧಿಕ ಮೊತ್ತ ಖರ್ಚು ಮಾಡಲಾಗುತ್ತಿದೆ. ಮುಂದಿನ ವರ್ಷ ಸರ್ಕಾರಿ ಶಾಲಾ ಮಕ್ಕಳನ್ನೂ ಗುರುತಿಸಿ, ಪೆÇ್ರೀತ್ಸಾಹಿಸಲಾಗುವ ದೆಂದು ಕಾಲ್ಸ್ ಶಾಲೆಯ ಸಂಸ್ಠಾಪಕ ದತ್ತಾ ಕರುಂಬಯ್ಯ ತಿಳಿಸಿದ್ದಾರೆ. ಇಲ್ಲಿನ ಕಾವೇರಿ ಕಾಲೇಜಿನಲ್ಲಿ ಓದುತ್ತಿರುವ ಜ್ಯೋತಿಕಾ ಹಾಗೂ ಪೂರ್ಣಿಮಾಗೆ ಎಲ್ಲ ಸೌಲಭ್ಯಗಳನ್ನೂ ಒದಗಿಸಿ, ಮಧ್ಯಾಹ್ನ ಬಿಸಿಊಟ ಒದಗಿಸುತ್ತಿರುವದೂ ವಿಶೇಷ.
ಅಥ್ಲೆಟಿಕ್ ಮೈದಾನ : ರೂ.10 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಸಿಂಥೆಟಿಕ್ ಅಥ್ಲೆಟಿಕ್ ಮೈದಾನದ ಮಧ್ಯ ಭಾಗದಲ್ಲಿ ಹುಲ್ಲು ಹಾಸಿನ ಫುಟ್‍ಬಾಲ್ ಮೈದಾನವಿದೆ. ಹೊನಲು ಬೆಳಕಿನಲ್ಲಿಯೂ ಕ್ರೀಡಾಕೂಟ ಆಯೋಜಿಸಲೂ ಪೂರಕ ಬೆಳಕಿನ ವ್ಯವಸ್ಥೆ ಕಲ್ಪಿಸಲಾಗಿದ್ದು, ಮುಂದೆ ಶಾಲಾ ಮಟ್ಟದ ವಿದ್ಯಾರ್ಥಿಗಳಿಗೆ ಹೊನಲು ಬೆಳಕಿನ ಅಥ್ಲೆಟಿಕ್ ಕ್ರೀಡೆಯನ್ನು ಪ್ರಾಯೋಗಿಕವಾಗಿ ಅಳವಡಿಸಲಾಗುವದು ಎಂದು ದತ್ತಾ ಕರುಂಬಯ್ಯ ಹಾಗೂ ಅಶ್ವಿನಿ ನಾಚಪ್ಪ ತಮ್ಮ ಯೋಜನೆಯನ್ನು ವಿವರಿಸಿದ್ದಾರೆ.
ವಿಶ್ವಮಟ್ಟದಲ್ಲಿ ಕ್ರೀಡಾತಾರೆಯಾಗಿ ಬೆಳಗಿ, ಓಟದ ರಾಣಿಯ ಸಾಧನೆ ಮಾಡಿದ ಅಶ್ವಿನಿ ನಾಚಪ್ಪ ಅವರ ಕ್ರೀಡಾ ಪ್ರತಿಷ್ಠಾನದ ಉದ್ದೇಶಗಳು ಹಂತ ಹಂತವಾಗಿ. ವ್ಯವಸ್ಥಿತವಾಗಿ ಈಡೇರುತ್ತಿರುವದು ಹಾಗೂ ರಾಷ್ಟ್ರಮಟ್ಟದಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ಅವಕಾಶ ಸಿಗಬೇಕೆಂಬ ಕನಸು ನನಸಾಗಿಸುವಲ್ಲಿ ಹೆಜ್ಜೆ ಹಾಕಿದೆ. ಒಬ್ಬ ಕ್ರೀಡಾತಾರೆಯಾಗಿ ತನ್ನ ಕನಸು ನನಸು ಮಾಡಿಕೊಳ್ಳುವಲ್ಲಿ ಅಶ್ವಿನಿ ನಾಚಪ್ಪ ಗೆದ್ದಿದ್ದಾರೆ. ಭಾರತದಲ್ಲಿ ಬೆರಳೆಣಿಕೆಯಷ್ಟು ಸಾಧಕರಲ್ಲಿ ಇವರೂ ಒಬ್ಬರಾಗಿರುವದು ಕ್ರೀಡಾ ಜಿಲ್ಲೆ, ಯೋಧರ ನಾಡು ಕೊಡಗಿಗೆ ಮತ್ತಷ್ಟು ಮೆರಗು ತಂದಿದೆ.
-ಶ್ರೀನಿವಾಸ್ ಮಧು.