ಕುಶಾಲನಗರ, ಡಿ. 6: ಹನುಮ ಜಯಂತಿ ಪ್ರಯುಕ್ತ ತಾ.9 ರಂದು ಕುಶಾಲನಗರದಲ್ಲಿ ಶೋಭಾಯಾತ್ರೆ ನಡೆಯಲಿದೆ ಎಂದು ಹನುಮಂತೋತ್ಸವ ಶೋಭಾಯಾತ್ರೆ ಸಮಿತಿಯ ಅಧ್ಯಕ್ಷ ಎಂ.ಡಿ.ಕೃಷ್ಣಪ್ಪ ತಿಳಿಸಿದ್ದಾರೆ.
ಅವರು ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, 34ನೇ ಹನುಮ ಜಯಂತಿ ಕಾರ್ಯಕ್ರಮ ಅಂಗವಾಗಿ ಕಳೆದ ವರ್ಷದಿಂದ ಶೋಭಾಯಾತ್ರೆಗೆ ಚಾಲನೆ ದೊರೆತಿದೆ. ಈ ಬಾರಿ ದಸರಾ ಮಾದರಿಯಲ್ಲಿ ವಿವಿಧ ದೇವಾಲಯಗಳ ವಿದ್ಯುತ್ ದೀಪಾಲಂಕೃತ ಮಂಟಪಗಳ ಶೋಭಾಯಾತ್ರೆ ನಡೆಯಲಿದೆ. ಈ ಸಂಬಂಧ ಶೋಭಾಯಾತ್ರೆ ಸಮಿತಿ ರಚನೆಯಾಗಿದ್ದು, ಎಲ್ಲ ರೀತಿಯ ಪೂರ್ವಸಿದ್ಧತೆ ನಡೆದಿದೆ. ಗುಡ್ಡೆಹೊಸೂರಿನ ವೀರಾಂಜನೇಯ ಆಚರಣಾ ಸಮಿತಿ, ಮಾದಾಪಟ್ಟಣ ಗ್ರಾಮದ ಶ್ರೀ ರಾಮದೂತ ಜಯಂತಿ ಆಚರಣಾ ಸಮಿತಿ, ಬೈಚನಹಳ್ಳಿಯ ಗೆಳೆಯರ ಬಳಗ, ಕುಶಾಲನಗರದ ಶ್ರೀ ರಾಮಾಂಜನೇಯ ಉತ್ಸವ ಸಮಿತಿ ಹಾಗೂ ಹಿಂದೂ ಜಾಗರಣಾ ವೇದಿಕೆ ಸಂಘಟನೆಗಳ ನೇತೃತ್ವದಲ್ಲಿ ದೇವಾಲಯಗಳ ಮಂಟಪಗಳು ತೆರಳಲಿವೆ.
ಸಂಜೆ 7 ಗಂಟೆಗೆ ಎಲ್ಲ ದೇವಾಲಯಗಳ ಮಂಟಪಗಳು ಆಂಜನೇಯ ದೇವಾಲಯ ಬಳಿ ಸೇರಿ ನಂತರ ರಥಬೀದಿ ಮೂಲಕ ಹೊರಟು ಗಣಪತಿ ದೇವಾಲಯ ಮುಂಭಾಗದಿಂದ ಬೈಚನಹಳ್ಳಿ ಮಾರ್ಗವಾಗಿ ಮಡಿಕೇರಿ ರಸ್ತೆ ಪೆಟ್ರೋಲ್ ಬಂಕ್ ತನಕ ತೆರಳಲಿದೆ ಎಂದು ಮಾಹಿತಿ ನೀಡಿದರು.
ಸಾವಿರಾರು ಭಕ್ತಾರು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪಾಲ್ಗೊಂಡ ಎಲ್ಲಾ ಮಂಟಪಗಳಿಗೂ ಸಮಿತಿ ವತಿಯಿಂದ ನೆನಪಿನ ಕಾಣಿಕೆ ನೀಡಲಾಗುತ್ತದೆ ಎಂದು ಸಮಿತಿಯ ಪ್ರಮುಖ ಅನುದೀಪ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ವಿವಿಧ ಸಮಿತಿಗಳ ಪ್ರಮುಖರಾದ ಬಿ.ಎನ್.ಶಶಿಕುಮಾರ್, ಎಂ.ಕೆ.ಪ್ರವೀಣ್, ಶ್ರೀಕಾಂತ್, ಈ.ಎಚ್.ಪ್ರಶಾಂತ್, ಹಿಂದೂ ಜಾಗರಣ ವೇದಿಕೆಯ ಮಂಜುನಾಥ್, ಎಸ್.ಕೆ.ರವಿ ಮತ್ತಿತರರು ಇದ್ದರು.