ಸಿದ್ದಾಪುರ, ಡಿ. 6: ನೆಲ್ಯಹುದಿಕೇರಿಯ ಕುಂಬಾರ ಗುಂಡಿಯ ಭಾಗದ ಸ್ಪಂದನ ಸಂತ್ರಸ್ತರಿಗೆ ಕೌಶಲ್ಯ ತರಬೇತಿ ಮುಗಿದ ಬಳಿಕ ಸಂತ್ರಸ್ತರು ತಯಾರಿಸಿದ ವಸ್ತುಗಳು ಮಾರಾಟದ ಘಟಕ ಪ್ರಾರಂಭದ ಕಾರ್ಯಕ್ರಮವು ನಡೆಯಿತು.
ಕಾರ್ಯಕ್ರಮವನ್ನು ನೆಲ್ಯಹುದಿಕೇರಿ ಕಾರ್ಪೊರೇಷನ್ ಬ್ಯಾಂಕ್ ವ್ಯವಸ್ಥಾಪಕ ಕೀರ್ತಿಪ್ರಸಾದ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಒ.ಡಿ.ಪಿ ಸಂಸ್ಥೆ ಹಾಗೂ ಕಾಪ್ ಸೆಟ್ ಸಂಸ್ಥೆಯ ವತಿಯಿಂದ ಸಂತ್ರಸ್ತ ಮಹಿಳೆಯರಿಗೆ ತರಬೇತಿ ಶಿಬಿರ ನೀಡಿರುವದು ಉತ್ತಮ ಕಾರ್ಯ ಎಂದರು.
ಈ ಬಾರಿಯ ಮಹಾಮಳೆಗೆ ಪ್ರವಾಹದಿಂದಾಗಿ ನೆಲ್ಯಹುದಿಕೇರಿಯ ಕುಂಬಾರಗುಂಡಿ ಭಾಗದಲ್ಲಿ ನೂರಾರು ಮನೆಗಳು ಹಾನಿಯಾಗಿದ್ದವು. ಈ ಹಿನ್ನೆಲೆಯಲ್ಲಿ ಮಹಿಳೆಯರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದರು. ಓ.ಡಿ.ಪಿ. ಸಂಸ್ಥೆ ಹಾಗೂ ಕೂಡಿಗೆಯ ಕಾಫ್‍ಸೆಟ್ ಸಂಸ್ಥೆಯ ವತಿಯಿಂದ ಸಂತ್ರಸ್ತ ಮಹಿಳೆಯರಿಗೆ ಸ್ವಯಂ ಉದ್ಯೋಗದ ಕೌಶಲ್ಯ ತರಬೇತಿಯನ್ನು ನೀಡಲಾಯಿತು. ಸಂತ್ರಸ್ತರು ತರಬೇತಿ ಬಳಿಕ ಬಟ್ಟೆ, ಬ್ಯಾಗ್, ಫೆನಾಯಿಲ್, ಸೋಪು, ಪೌಡರ್ ಹಾಗೂ ಮಸಾಲೆ ಪದಾರ್ಥಗಳ ಮಾರಾಟದ ಘಟಕ ಪ್ರಾರಂಭಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಸಿದ್ದಾಪುರದ ಸಂತ ಜೋಸೆಫ್ ಚರ್ಚ್ ಧರ್ಮಗುರುಗಳಾದ ರೇ.ಫಾದರ್ ಜೋಸ್ ಮಾತನಾಡಿ, ಸಂತ್ರಸ್ತರು ಕಷ್ಟದ ಸಂದರ್ಭದಲ್ಲಿ ಪರಸ್ಪರ ಪ್ರೀತಿ ವಿಶ್ವಾಸದಿಂದ ಮುಂದುವರಿಯಬೇಕು, ಸೌಹಾರ್ದತೆಯಿಂದ ಜೀವನ ನಡೆಸಬೇಕೆಂದು ಕಿವಿಮಾತು ಹೇಳಿದರು. ತನ್ನ ವತಿಯಿಂದ ಒಂದು ಹೊಲಿಗೆ ಯಂತ್ರವನ್ನು ನೀಡುವದಾಗಿ ತಿಳಿಸಿದರು.
ಕಾಫ್‍ಸೆಟ್‍ನ ಪ್ರಮುಖರಾದ ಸಲಾಹುದ್ದೀನ್ ಮಾತನಾಡಿ, ತರಬೇತಿ ಪಡೆದುಕೊಂಡ ಮಹಿಳೆಯರು ಸ್ವಯಂ ಉದ್ಯೋಗದ ಮೂಲಕ ತಮ್ಮ ಭವಿಷ್ಯವನ್ನು ರೂಪಿಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದು ಕರೆ ನೀಡಿದರು.
ಓ.ಡಿ.ಪಿ. ಸಂಸ್ಥೆ ಜಿಲ್ಲಾ ಸಂಚಾಲಕಿ ಜಾಯಿಸ್ ಮೆನೆಜೆಸ್ ಮಾತನಾಡಿ, ಮಹಿಳೆಯರು ಯಾವದೇ ಸಮಸ್ಯೆಗಳು ಬಂದಲ್ಲಿ ಧೃತಿಗೆಡ ಬಾರದೆಂದು ಕರೆ ನೀಡಿದರು. ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ ನೋವನ್ನು ಮರೆತು ಸ್ವಯಂ ಉದ್ಯೋಗದ ಮೂಲಕ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟಿ.ಜೆ. ದೇವಸಿ ಸಬಾಸ್ಟಿನ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಓ.ಡಿ.ಪಿ. ಸಂಸ್ಥೆಯ ವಿಜಯನಾರಾಯಣ ಇನ್ನಿತರರು ಹಾಜರಿದ್ದರು. ಅನ್ನಮ್ಮಾ ಕುಟ್ಟಿ ಸ್ವಾಗತಿಸಿ, ಗ್ರೇಸಿಮಣಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.