ಮಡಿಕೇರಿ, ಡಿ. 6: ಕಡಗದಾಳು ಬದರ್ ಜಮಾಅತ್‍ನ ಅಧೀನದಲ್ಲಿರುವ ನುಸ್ರತುಲ್ ಇಸ್ಲಾಂ ಸ್ವಲಾತ್ ಕಮಿಟಿಯ ಆಶ್ರಯದಲ್ಲಿ ಇತ್ತೀಚೆಗೆ ಪ್ರಥಮ ಸ್ವಲಾತ್ ವಾರ್ಷಿಕೋತ್ಸವ ನಡೆಯಿತು.

ಎಮ್ಮೆಮಾಡಿನ ಸಯ್ಯಿದ್ ಇಲ್ಯಾಸ್ ತಂಙಳ್ ಅವರ ನೇತೃತ್ವದಲ್ಲಿ ನಡೆದ ಸ್ವಲಾತ್ ಕಾರ್ಯಕ್ರಮವನ್ನು ಮಸೀದಿಯ ಖತೀಬ್ ಕೆ.ಎಂ. ಇಬ್ರಾಹಿಂ ಮದನಿ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಇಲ್ಯಾಸ್ ತಂಙಳ್ ಅವರು, ಜನತೆ ಸುಳ್ಳು, ವಂಚನೆ, ಮೋಸ, ಸೇಡು, ಸಿಡುಕುಗಳಿಂದ ದೂರ ಸರಿದು ಸ್ನೇಹ, ಸತ್ಯ, ನಂಬಿಕೆ, ದೇಶಭಕ್ತಿ, ಸೌಹಾರ್ದತೆಯನ್ನು ಮೈಗೂಡಿಸಿಕೊಂಡಲ್ಲಿ ಸಮಾಜವು ಕ್ಷೇಮವಾಗಿ ಮುಂದುವರಿಯುತ್ತದೆ ಎಂದು ಹೇಳಿದರು. ಪ್ರತಿಯೊಬ್ಬರೂ ತಮ್ಮ ಧರ್ಮ ಪಾಲನೆ ಮಾಡುವಂತೆ ಅವರು ಕರೆ ನೀಡಿದರು. ಮುಖ್ಯ ಅತಿಥಿಯಾಗಿ ಮಾತನಾಡಿದ ಕಡಗದಾಳು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಾದೇಟಿರ ತಿಮ್ಮಯ್ಯ, ಕಡಗದಾಳು ಗ್ರಾಮ ವ್ಯಾಪ್ತಿಯಲ್ಲಿ ಎಲ್ಲ ವರ್ಗದ ಜನರೂ ಸೌಹಾರ್ದತೆಯಿಂದ ಬದುಕುತ್ತಿದ್ದು, ಈ ಗ್ರಾಮ ಸರ್ವ ಜನಾಂಗದ ಶಾಂತಿಯ ತೋಟ ಎಂದು ಪ್ರಶಂಶಿಸಿದರು.

ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷ ಕೆ.ಎ. ಯಾಕೂಬ್, ಪತ್ರಕರ್ತ ಎಂ.ಇ. ಮಹಮದ್, ಎಂ.ಎಸ್. ಯೂಸುಫ್ ಇವರುಗಳೂ ಮಾತನಾಡಿದರು. ಕಾರ್ಯಕ್ರಮದ ಆರಂಭದಲ್ಲಿ ತಾಜುದ್ದೀನ್ ಅವರ ಮಾರ್ಗದರ್ಶನದಲ್ಲಿ ಆಕರ್ಷಕ ದಫ್ ಪ್ರದರ್ಶನ ನಡೆಯಿತು. ಹಾಕತ್ತೂರು ಅಬೂಬಕರ್ ಹಾಜಿ, ಕಡಗದಾಳು ಮದರಸದ ಮುಖ್ಯೋಪಾಧ್ಯಾಯ ಮೊಹಮದ್ ಮದನಿ, ಎಂ.ಎಂ. ಅಶ್ರಫ್, ನಾಸಿರ್ ಮುಂತಾದವರು ಉಪಸ್ಥಿತರಿದ್ದರು. ಬಶೀರ್ ಅಝ್‍ಹರಿ ಸ್ವಾಗತಿಸಿ, ವಂದಿಸಿದರು.