ಗೋಣಿಕೊಪ್ಪ ವರದಿ, ಡಿ. 6: ಕೊಡಗು ಸೇರಿದಂತೆ ಹೊರ ಜಿಲ್ಲೆಗಳಲ್ಲೂ ಲಯನ್ಸ್ ಕ್ಲಬ್ ಹಮ್ಮಿಕೊಂಡಿರುವ ಅಂಗಾಂಗದಾನ ಜಾಗೃತಿ ಯೋಜನೆಯಿಂದ ಜನರಲ್ಲಿ ಮಾನವೀಯ ಮೌಲ್ಯದ ಬಗ್ಗೆ ಅರಿವು ಮೂಡಿಸಲು, ಪ್ರೋತ್ಸಾಹ ನೀಡಲು ಸಹಕಾರಿಯಾಗಿದೆ ಎಂದು ಲಯನ್ಸ್ ಜಿಲ್ಲಾ ರಾಜ್ಯಪಾಲ ರೊನಾಲ್ಡ್ ಗೋಮ್ಸ್ ಹೇಳಿದ್ದಾರೆ.

ಕೊಡಗು ಸೇರಿದಂತೆ ಲಯನ್ಸ್ ಜಿಲ್ಲಾ ವ್ಯಾಪ್ತಿಯ ವಿವಿಧ ಜಿಲ್ಲೆಗಳಲ್ಲಿ ಅಂಗಾಂಗ ದಾನದ ಮಹತ್ವ ಹೆಚ್ಚು ಜನರಿಗೆ ತಿಳಿಸಲು ಸಹಕಾರಿಯಾಗಿದೆ. ಸುಮಾರು 11 ಕ್ಲಬ್‍ಗಳು ಅಂಗಾಂಗ ದಾನಕ್ಕೆ ಹಮ್ಮಿಕೊಂಡಿರುವ ಜಾಗೃತಿ, ನೋಂದಣಿ ಕಾರ್ಯಕ್ರಮ ಜೀವದ ಮಹತ್ವದ ಸಂದೇಶ ನೀಡಲು ಸಾಧ್ಯವಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ನೀರಿನ ಅಭಾವ ನೀಗಿಸಲು ನೀರು ಸಂರಕ್ಷಣೆ ಚಿಂತನೆಯಲ್ಲಿ ಮಂಗಳೂರಿನಲ್ಲಿ ಕೆರೆ ಅಭಿವೃಧ್ಧಿಗೆ ಲಯನ್ಸ್ ಕ್ಲಬ್ ಮುಂದಾಗಿದೆ. 8 ಏಕರೆ ಭೂಮಿಯನ್ನು ಅಲ್ಲಿನ ನಗರ ಪಾಲಿಕೆ ಸಹಕಾರದಲ್ಲಿ ನೀರು ಸಂಗ್ರಹಕ್ಕೆ ಯೋಜನೆ ರೂಪಿಸಿದ್ದು, ಜನರಲ್ಲಿ ನೀರಿನ ಸಂರಕ್ಷಣೆಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಇದರಂತೆ ಗಿಡ ನೆಡುವ ಕಾರ್ಯಕ್ರಮ ಕೂಡ ಅರಿವು ಮೂಡಿಸಲು ಸಹಕಾರಿಯಾಗುತ್ತದೆ ಎಂದರು.

ಅಂಧತ್ವ ನಿವಾರಣೆ, ಹಸಿವು ಮುಕ್ತ ಜನತೆ ಯೋಜನೆ ಕೂಡ ಜನರಿಗೆ ಸಹಕಾರವಾಗುತ್ತಿದೆ. ಶಿಕ್ಷಕರಿಗೆ ತರಬೇತಿ ನೀಡುವ ಮೂಲಕ ಹದಿಹರೆಯದÀಲ್ಲಿ ಹಾದಿ ತಪ್ಪುವ ಮಾರ್ಗವನ್ನು ಶಿಕ್ಷಕರ ಮೂಲಕ ನಿಯಂತ್ರಣಕ್ಕೆ ಶಿಬಿರಗಳನ್ನು ನಡೆಸಲಾಗುತ್ತಿದೆ. 13 ವಿಶೇಷ ಕಾರ್ಯಕ್ರಮಗಳು ಲಯನ್ಸ್ ಸಂಸ್ಥೆಗೆ ಹೆಚ್ಚು ಹೆಮ್ಮೆ ತಂದಿದೆ. ಲಯನ್ಸ್ ಸಂಸ್ಥೆ ವತಿಯಿಂದ ಗೋಣಿಕೊಪ್ಪ ಭಾಗದಲ್ಲಿ ನಡೆಸುತ್ತಿರುವ ಶಿಕ್ಷಣ ಸಂಸ್ಥೆ ಕೂಡ ಗ್ರಾಮೀಣ ಭಾಗದಲ್ಲಿ ಶಿಕ್ಷಣಕ್ಕೆ ಒತ್ತು ನೀಡಲು ಸಹಕಾರಿಯಾಗಿದೆ ಎಂದರು.

ಗೋಷ್ಠಿಯಲ್ಲಿ ಗೋಣಿಕೊಪ್ಪ ಲಯನ್ಸ್ ಕ್ಲಬ್ ಅಧ್ಯಕ್ಷ ನಿತಿ ಪೂಣಚ್ಚ, ಕಾರ್ಯದರ್ಶಿ ಡಾ. ಅಮ್ಮಂಡ ಚಿಣ್ಣಪ್ಪ, ಖಜಾಂಜಿ ಅಲ್ಲುಮಾಡ ಸುನಿಲ್, ಪ್ರಮುಖರಾದ ಬೋಸ್ ಪೆಮ್ಮಯ್ಯ, ಯಮುನಾ ಚಂಗಪ್ಪ, ಎಂ. ಎಂ. ಗಣಪತಿ ಇದ್ದರು.