ಕುಶಾಲನಗರ, ಡಿ. 6: ಪ್ರತಿಯೊಬ್ಬರೂ ಅಪ್ರತಿಮ ಪ್ರತಿಭೆ ಹೊಂದಿದ್ದು ಅದರ ಸದ್ಬಳಕೆಯಾಗಬೇಕಾಗಿದೆ ಎಂದು ಅಂತರರಾಷ್ಟ್ರೀಯ ಅಥ್ಲಿಟ್ ಹಾಗೂ ಅರ್ಜುನ ಪ್ರಶಸ್ತಿ ವಿಜೇತ ಅರ್ಜುನ್ ದೇವಯ್ಯ ಕರೆ ನೀಡಿದ್ದಾರೆ. ಕೂಡಿಗೆಯ ಸೈನಿಕ ಶಾಲೆಯಲ್ಲಿ ಎರಡು ದಿನಗಳ ಕಾಲ ನಡೆದ ಅಂತರ ನಿಲಯ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಿದ್ಯಾರ್ಥಿಗಳು ಧೈರ್ಯ, ದೃಢತೆ, ಪ್ರಾಮಾಣಿಕತೆಯೊಂದಿಗೆ ತಮ್ಮ ಗುರಿಯನ್ನು ಸಾಧಿಸಲು ಪ್ರಯತ್ನ ಪಡಬೇಕೆಂದು ತಿಳಿಸಿದರು. ತಮ್ಮನ್ನು ಇತರರೊಂದಿಗೆ ಹೋಲಿಸಿಕೊಳ್ಳದೆ ವೇದಿಕೆಗಳ ಮೂಲಕ ತಮ್ಮ ಪ್ರತಿಭೆಗಳನ್ನು ಹೊರಗೆಡವಬೇಕು ಎಂದು ತಿಳಿಸಿದ ಅರ್ಜುನ್ ದೇವಯ್ಯ, ಎಂದಿಗೂ ಗುರುಗಳನ್ನು ಮಾತ್ರ ಮರೆಯದೆ ಅವರಿಗೆ ಗೌರವ ನೀಡುವ ಕಾಯಕ ಮಾಡಬೇಕೆಂದರು.

ಕ್ರೀಡಾಕೂಟದಲ್ಲಿ ಹಲವು ವಿಭಾಗಗಳಲ್ಲಿ ಸ್ಪರ್ಧೆಗಳು ಜರುಗಿದವು. ಹಿರಿಯರ ವಿಭಾಗದಲ್ಲಿ 4ಘಿ100 ಮೀ ರಿಲೇ ಓಟ ಹಾಗೂ ಕಿರಿಯರ ವಿಭಾಗದ 200ಮೀ ಓಟದ ಸ್ಪರ್ಧೆ ಹಾಗೂ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಮಧ್ಯೆ ಹಗ್ಗಜಗ್ಗಾಟ ಸ್ಪರ್ಧೆ ಜರುಗಿತು. ನಂತರ ಶಾಲೆಯ ವಿದ್ಯಾರ್ಥಿಗಳಿಂದ ಏರೋಬಿಕ್ಸ್ ನೃತ್ಯ ಪ್ರದರ್ಶಿಸಲಾಯಿತು.

ಮುಖ್ಯ ಅತಿಥಿ ಅರ್ಜುನ್ ದೇವಯ್ಯ ಸ್ಪರ್ಧೆಯಲ್ಲಿ ವಿಜೇತರಾದ ಸ್ಪರ್ಧಿಗಳಿಗೆ ಪ್ರಶಸ್ತಿಪತ್ರ ಮತ್ತು ಪದಕಗಳನ್ನು ವಿತರಿಸಿ ಗೌರವಿಸಿದರು.

ಶಾಲೆಯ ವಿದ್ಯಾರ್ಥಿಗಳು ಪಥಸಂಚಲವನ್ನು ನಡೆಸಿ ನೆರೆದಿದ್ದ ಸಭಿಕರ ಗಮನ ಸೆಳೆದರು.

ಶಾಲೆಯ ಪ್ರಭಾರ ಪ್ರಾಂಶುಪಾಲರಾದ ಲೆಫ್ಟಿನೆಂಟ್ ಕರ್ನಲ್ ಸೀಮಾ ತ್ರಿಪಾಠಿ, ಆಡಳಿತಾಧಿಕಾರಿ ಸ್ಕ್ವಾಡ್ರನ್ ಲೀಡರ್ ಆರ್ ಕೆ ಡೇ, ಶಾಲೆಯ ವೈದ್ಯಾಧಿಕಾರಿಗಳಾದ ಡಾ. ಮಹೇಶ್, ಹಿರಿಯ ಶಿಕ್ಷಕ ಸೂರ್ಯನಾರಾಯಣ, ಕೊಪ್ಪ ಭಾರತ್ ಮಾತಾ ಶಾಲೆಯ ಪ್ರಾಂಶುಪಾಲ ಫಾ. ಜೋಸೆಫ್, ಶಾಲೆಯ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ಕಾರ್ಯಕ್ರಮದಲ್ಲಿ ಕೆಡೆಟ್ ಸುಜಿತ್ ಬಿರಾದಾರ್ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.