ಮಡಿಕೇರಿ, ಡಿ. 6: ಮಡಿಕೇರಿಯ ಚೈನ್‍ಗೇಟ್ ಬಳಿಯಲ್ಲಿರುವ ಜಾಗದಲ್ಲಿ ಖಾಸಗಿ ರೆಸಾರ್ಟ್‍ವೊಂದು ತ್ಯಾಜ್ಯ ವಿಲೇವಾರಿ ಮಾಡುವ ಸಲುವಾಗಿ ರಸ್ತೆಯನ್ನು ಅಗೆದು ಚರಂಡಿ ನಿರ್ಮಾಣ ಮಾಡಿರುವದನ್ನು ಮಡಿಕೇರಿ ರಕ್ಷಣಾ ವೇದಿಕೆ ಖಂಡಿಸಿ ಪ್ರತಿಭಟನೆ ನಡೆಸಿತು.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ರಕ್ಷಣಾ ವೇದಿಕೆ ಪದಾಧಿಕಾರಿಗಳು ಚರಂಡಿ ನಿರ್ಮಾಣಕ್ಕೆ ಅನುಮತಿ ನೀಡಿರುವ ನಗರಸಭೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭ ಮಡಿಕೇರಿ ರಕ್ಷಣಾ ವೇದಿಕೆಯ ಖಜಾಂಜಿ ಉಮೇಶ್ ಮಾತನಾಡಿ, ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ಹಲವಾರು ಸಮಸ್ಯೆಗಳಿದ್ದು ರಸ್ತೆಗಳು ನಡೆದಾಡಲು ಆಗದಂತಹ ಸ್ಥಿತಿಯನ್ನು ತಲುಪಿದೆ. ಈ ನಡುವೆ ನಗರಸಭೆ ಚೈನ್‍ಗೇಟ್ ಬಳಿಯಲ್ಲಿರುವ ಖಾಸಗಿ ರೆಸಾರ್ಟ್‍ವೊಂದರ ತ್ಯಾಜ್ಯ ವಿಲೇವಾರಿಗಾಗಿ ಪೈಪ್ ಲೈನ್ ಅಳವಡಿಸಲು ಅನುಮತಿ ನೀಡಿದೆ. ರೆಸಾರ್ಟ್ ಮಾಲೀಕರು ರಸ್ತೆಯನ್ನು ಅಗೆದು ಚರಂಡಿಯನ್ನು ತೆಗೆದಿದ್ದಾರೆ. ಈ ಪೈಪ್ ಮೂಲಕ ಹೋಗುವ ನೀರು ಜನವಸತಿ ಪ್ರದೇಶಗಳತ್ತ ಹಾಗೂ ಸಮೀಪದಲ್ಲಿರುವ ಮುನೀಶ್ವರ ದೇವಾಲಯಕ್ಕೆ ನೇರವಾಗಿ ಹೋಗುತ್ತದೆ. ರಕ್ಷಣಾ ವೇದಿಕೆಯ ಪದಾಧಿಕಾರಿಗಳ ಪ್ರಯತ್ನದಿಂದ ಕಾಮಗಾರಿ ಸ್ಥಗಿತಗೊಂಡಿದ್ದು ಈ ಬಗ್ಗೆ ಸೂಕ್ತ ತನಿಖೆಯಾಗಬೇಕೆಂದು ಆಗ್ರಹಿಸಿದರು.
ನಗರಸಭೆಯ ಮಾಜಿ ಸದಸ್ಯ ವಿಜಯಕುಮಾರ್ ಮಾತನಾಡಿ, ನಗರಸಭೆ ವತಿಯಿಂದ ಅನುಮತಿ ದೊರೆತ ಹಿನ್ನೆಲೆ ಖಾಸಗಿ ರೆಸಾರ್ಟ್‍ನವರು ರಸ್ತೆಯನ್ನು ಒಡೆದು ಚರಂಡಿ ನಿರ್ಮಾಣ ಮಾಡಿರುವದು ಖಂಡನೀಯ. ಕೂಡಲೇ ಅಗೆಯಲಾಗಿರುವ ರಸ್ತೆಯನ್ನು ಸರಿಪಡಿಸಬೇಕೆಂದು ಆಗ್ರಹಿಸಿದರು.
ಇದೇ ಸಂದರ್ಭ ನಗರಸಭೆಯ ಇಂಜಿನಿಯರ್‍ಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಡಿಕೇರಿ ನಗರ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಇದ್ದರು.