ಕುಶಾಲನಗರ, ಡಿ. 6: ಕುಶಾಲನಗರ ವ್ಯಾಪ್ತಿಯಲ್ಲಿ ನದಿಗೆ ನೇರವಾಗಿ ಕಲುಷಿತ ತ್ಯಾಜ್ಯಗಳನ್ನು ಹರಿಸುವದು, ನದಿಗೆ ತ್ಯಾಜ್ಯಗಳನ್ನು ಎಸೆಯುವದನ್ನು ನಿರ್ಭಂದಿಸಲಾಗಿದೆ ಎಂದು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಸುಜಯ್‍ಕುಮಾರ್ ತಿಳಿಸಿದ್ದಾರೆ.

ನದಿ ತಟಗಳಲ್ಲಿ ಬಯಲು ಶೌಚಕ್ಕೆ ತೆರಳುವವರ ಮೇಲೆ ಕಟ್ಟುನಿಟ್ಟಿನ ಕಾನೂನು ಕ್ರಮಕ್ಕೆ ಮುಂದಾಗುವದಾಗಿ ಅವರು ತಿಳಿಸಿದ್ದು, ಈ ಸಂಬಂಧ ನದಿ ತಟಗಳಲ್ಲಿ ಎಚ್ಚರಿಕೆ ಫಲಕಗಳನ್ನು ಅಳವಡಿಸಲು ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಪ್ರವಾಸಿಗರು ನದಿಯ ಸ್ವಚ್ಛತೆ ಕಾಪಾಡುವಲ್ಲಿ ಸಹಕರಿಸು ವಂತಾಗಬೇಕು. ಕಲುಷಿಕೆ ಮಾಡುವ ಪ್ರಕರಣಗಳು ಕಂಡುಬಂದಲ್ಲಿ ದಂಡ ವಿಧಿಸಲಾಗುವದು ಎಂದು ಅವರು ತಿಳಿಸಿದ್ದಾರೆ.

ಕುಶಾಲನಗರ ಅಯ್ಯಪ್ಪಸ್ವಾಮಿ ದೇವಾಲಯ ಬಳಿಯ ಕಾವೇರಿ ಆರತಿ ಕ್ಷೇತ್ರದ ವ್ಯಾಪ್ತಿಯಲ್ಲಿ ನದಿಯಲ್ಲಿ ತ್ಯಾಜ್ಯ ಎಸೆಯುವದು, ಬಯಲು ಶೌಚ ಮಾಡುವವರ ಪತ್ತೆಗಾಗಿ ಕಾವೇರಿ ನದಿ ಸ್ವಚ್ಛತಾ ಆಂದೋಲನ ವತಿಯಿಂದ ಸಿಸಿ ಕ್ಯಾಮೆರ ಅಳವಡಿಕೆ ಮಾಡಲಾಗಿದೆ. ಅಂತಹ ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡಿದಲ್ಲಿ ಪಂಚಾಯ್ತಿ ಮೂಲಕ ದಂಡ ವಿಧಿಸಿ ಕಾನೂನು ಕ್ರಮಕ್ಕೆ ಮುಂದಾಗುವದಾಗಿ ಕುಶಾಲನಗರ ಪಪಂ ಆರೋಗ್ಯಾಧಿಕಾರಿ ಉದಯ್‍ಕುಮಾರ್ ತಿಳಿಸಿದ್ದಾರೆ.