ಮಡಿಕೇರಿ, ಡಿ. 5: ಹಾಕಿ ಕರ್ನಾಟಕ ವತಿಯಿಂದ ಬೆಂಗಳೂರಿನ ಫೀ.ಮಾ. ಕಾರ್ಯಪ್ಪ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಸಬ್ ಜ್ಯೂನಿಯರ್ ಬಾಲಕರ ಹಾಕಿ ಲೀಗ್ ಪಂದ್ಯಾವಳಿಯಲ್ಲಿ ಹಾಕಿ ಕೂರ್ಗ್, ಡಿವೈಎಸ್ ಕೂಡಿಗೆ ‘ಎ’ ಹಾಗೂ ಡಿವೈಎಸ್ ಪೊನ್ನಂಪೇಟೆ ತಂಡಗಳು ಸೆಮಿಫೈನಲ್ಗೆ ಪ್ರವೇಶಿಸಿವೆ.
ಇಂದು ನಡೆದ ಪಂದ್ಯಾವಳಿಯಲ್ಲಿ ಕೂಡಿಗೆ ತಂಡ ಹಾಕಿ ಕೂರ್ಗ್ ತಂಡವನ್ನು 4-1 ಗೋಲುಗಳಿಂದ ಸೋಲಿಸಿತು. ಕೂಡಿಗೆ ಪರ ಹರ್ಷ ಹೆಚ್.ಆರ್., ಪವನ್ ಕೆ.ಜೆ., ನಕುಲ್, ದೇವೇಂದ್ರ ಗೋಲು ಗಳಿಸಿದರೆ, ಹಾಕಿ ಕೂರ್ಗ್ ಪರ ಸಿ.ಪಿ. ಲಿವಿನ್ ಗೋಲು ಗಳಿಸಿದರು. ಪೊನ್ನಂಪೇಟೆ ತಂಡ ಬಳ್ಳಾರಿ ತಂಡವನ್ನು 8-1 ಗೋಲುಗಳಿಂದ ಸೋಲಿಸಿತು. ಪೊನ್ನಂಫೇಟೆ ಪರ ಬಿ.ಆರ್. ಬಿಪಿನ್ (3), ನಂಜುಂಡ ತಿಮ್ಮಯ್ಯ (2), ದ್ರುವಿನ್, ಆರ್ಯನ್ ಅವರುಗಳು ಗೋಲು ಬಾರಿಸಿದರೆ ಬಳ್ಳಾರಿ ಪರ ಪೂಮಣ್ಣ ಗೋಲು ಹೊಡೆದರು.