ಮಡಿಕೇರಿ, ಡಿ. 4: ವಿವಿಧ ಹಂತಗಳಲ್ಲಿ ದೌರ್ಜನ್ಯಕ್ಕೊಳಗಾಗುವ ಮಹಿಳೆಯರು, ಹೆಣ್ಣುಮಕ್ಕಳಿಗೆ ಎಲ್ಲ ರೀತಿಯ ನೆರವು ಒಂದೇ ಸೂರಿನಡಿ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯಾಚರಿಸುತ್ತಿರುವ ‘ಗೆಳತಿ’ ವಿಶೇಷ ಚಿಕಿತ್ಸಾ ಘಟಕದ ಬದಲಿಗೆ ಇನ್ನು ಮುಂದಕ್ಕೆ ‘ಸಖಿ’ ಎಂಬ ‘ಒನ್ ಸ್ಟಾಪ್ ಸೆಂಟರ್’ ಹೆಸರಿನಲ್ಲಿ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸಲಿದೆ. ಇದಕ್ಕಾಗಿ ಕೇಂದ್ರ ಸರಕಾರ ಅನುದಾನ ಕೂಡ ಬಿಡುಗಡೆ ಮಾಡಿದ್ದು, ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಈ ಘಟಕ ನಿರ್ಮಾಣವಾಗಲಿದೆ. ಈಗಾಗಲೇ ಮಡಿಕೇರಿ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಕಟ್ಟಡ ಕಾಮಗಾರಿ ಆರಂಭಗೊಂಡಿದೆ.ದೌರ್ಜನ್ಯಕ್ಕೊಳಗಾಗುವ ಮಹಿಳೆಯರು ಹಾಗೂ ಹೆಣ್ಣುಮಕ್ಕಳಿಗೆ ಆಪ್ತ ಸಮಾಲೋಚಕರು (ಕೌನ್ಸಿಲರ್), ಸಾಮಾಜಿಕ (ಮೊದಲ ಪುಟದಿಂದ) ಕಾರ್ಯಕರ್ತರು, ಪೊಲೀಸ್, ವಕೀಲರು, ಸಹಾಯಕರು ಹಾಗೂ ಕಾವಲುಗಾರರ ನೆರವು ಹಾಗೂ ಸೇವೆಗಳು ಒಂದೇ ಸೂರಿನಡಿ ಕಲ್ಪಿಸುವ ನಿಟ್ಟಿನಲ್ಲಿ 2014 ರಲ್ಲಿ ಜಿಲ್ಲೆಯ ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ‘ಗೆಳತಿ’ ಹೆಸರಿನಲ್ಲಿ ವಿಶೇಷ ಚಿಕಿತ್ಸಾ ಘಟಕವನ್ನು ರಾಜ್ಯ ಸರಕಾರ ಆರಂಭಿಸಿತ್ತು. ಇದೀಗ ಕೇಂದ್ರ ಸರಕಾರ ಮತ್ತಷ್ಟು ಅಧಿಕಾರಿಗಳು, ಸಿಬ್ಬಂದಿಗಳ ನೇಮಕಾತಿಯೊಂದಿಗೆ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ‘ಸಖಿ’ ಹೆಸರಿನಲ್ಲಿ ಘಟಕ ಆರಂಭಿಸಿದ್ದು, ಅನುದಾನ ಬಿಡುಗಡೆ ಮಾಡಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧೀನದಲ್ಲಿ ಈ ಘಟಕ ಕಾರ್ಯಾಚರಿಸಲಿದೆ.
38 ಲಕ್ಷ ಅನುದಾನ: ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿರುವ ಮಹಿಳೆಯರ ಮತ್ತು ಮಕ್ಕಳ ಆಸ್ಪತ್ರೆಯ ವಿಶೇಷ ಶಸ್ತ್ರ ಚಿಕಿತ್ಸಾ ವಾರ್ಡ್‍ನ ಎರಡು ಕೊಠಡಿಗಳಲ್ಲಿ ಸದ್ಯಕ್ಕೆ ‘ಗೆಳತಿ’ ಘಟಕ ಕಾರ್ಯನಿರ್ವಹಿಸುತ್ತಿದೆ. ಇದೇ ಆಸ್ಪತ್ರೆಯ ಆವರಣದಲ್ಲಿರುವ ವೈದ್ಯರ ವಸತಿ ಗೃಹದ ಬಳಿಯ ಹಳೆಯ ಕಟ್ಟಡವೊಂದರ ಮೇಲಂತಸ್ತಿನಲ್ಲಿ ‘ಸಖಿ’ ಕಟ್ಟಡದ ಕಾಮಗಾರಿ ನಡೆಯುತ್ತಿದೆ. ಸದ್ಯಕ್ಕೆ ಪಿಲ್ಲರ್ ನಿರ್ಮಾಣ ಕಾರ್ಯ ಆಗುತ್ತಿದೆ.ಗೆಳತಿ’ ಘಟಕ ಸದ್ಯಕ್ಕೆ ಮುಂದುವರಿಯಲಿದೆ. ಇದೀಗ ಕೇಂದ್ರ ಸರಕಾರ ‘ಸಖಿ’ ‘ಒನ್ ಸ್ಟಾಪ್ ಸೆಂಟರ್’ ಎಂದು ಜಾರಿ ಮಾಡಿದ್ದು, ಜಿಲ್ಲೆಗೆ ರೂ. 38 ಲಕ್ಷ ಅನುದಾನ ಬಿಡುಗಡೆಯಾಗಿದೆ. ಕಟ್ಟಡ ಕಾಮಗಾರಿ ಆಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಅರುಂಧತಿ ಮಾಹಿತಿ ನೀಡಿದರು.
ಸದ್ಯಕ್ಕೆ ಕೌನ್ಸಿಲರ್, ಸಾಮಾಜಿಕ ಕಾರ್ಯಕರ್ತರು, ಕಾವಲುಗಾರರು, ಪೊಲೀಸ್, ವಕೀಲರು, ಸಹಾಯಕರು ಸೇವೆ ಸಲ್ಲಿಸುತ್ತಿದ್ದಾರೆ.ಇವರುಗಳೊಂದಿಗೆ ಕೇಂದ್ರ ಆಡಳಿತಾಧಿಕಾರಿ ಹಾಗೂ ಹೆಚ್ಚುವರಿಯಾಗಿ ಕಾನೂನು ಸಲಹೆಗಾರರು, ಸಾಮಾಜಿಕ ಕಾರ್ಯಕರ್ತರು, ಕಾವಲುಗಾರರನ್ನು ನಿಯೋಜಿಸಲು ಕೇಂದ್ರದ ಆದೇಶವಿದೆ. ಅದರಂತೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಅವರು ತಿಳಿಸಿದರು.
ಆರು ಮಂದಿ ಸೇವೆಯಲ್ಲಿ...
ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ‘ಗೆಳತಿ’ ಘಟಕದಲ್ಲಿ ಕೌನ್ಸಿಲರ್ ಆಗಿ ನಿಶ್ಚಲ, ಸಾಮಾಜಿಕ ಕಾರ್ಯಕರ್ತೆಯರಾಗಿ ಭವ್ಯ ಹಾಗೂ ಕಾವೇರಮ್ಮ, ಕಾವಲುಗಾರ್ತಿ ಹಾಗೂ ಸಹಾಯಕಿಯಾಗಿ ಋತು, ಸಹಾಯಕ ಠಾಣಾಧಿಕಾರಿ ಭಾರತಿ, ಕಾನೂನು ಸಲಹೆಗಾರರಾಗಿ ಪದ್ಮ ಅವರುಗಳು ಸೇವೆ ಸಲ್ಲಿಸುತ್ತಿದ್ದಾರೆ. ತಿಂಗಳಿಗೆ 6 ರಿಂದ 7 ದೌರ್ಜನ್ಯಕ್ಕೊಳಗಾದವರ ಪ್ರಕರಣಗಳು ದಾಖಲಾಗುತ್ತವೆ. ಬಹುತೇಕ ಪ್ರಕರಣಗಳು ಪರಿಹರಿಸಲ್ಪಡುತ್ತವೆ ಎಂದು ನಿಶ್ಚಲ, ಭವ್ಯ ಹಾಗೂ ಋತು ಅವರುಗಳು ಮಾಹಿತಿ ನೀಡಿದರು.
ಸ್ಥೈರ್ಯ ನಿಧಿಯಡಿ ದೌರ್ಜನ್ಯಕ್ಕೊಳಗಾದ 18 ವರ್ಷ ಮೇಲ್ಪಟ್ಟವರಿಗೆ ರೂ. 25 ಸಾವಿರ ಪರಿಹಾರ ನೀಡಲಾಗುವದು. ಸಂತ್ರಸ್ತೆಯರು ಮೃತಪಟ್ಟರೆ ರೂ. 1 ಲಕ್ಷ ನೀಡಲಾಗುವದು. 18 ವರ್ಷದೊಳಗಿನ ಬಾಲಕಿಯರಿಗೆ ರೂ. 5 ಸಾವಿರದಷ್ಟು ಪರಿಹಾರ ನೀಡಲಾಗುವೆಂದು ಅವರುಗಳು ಮಾಹಿತಿ ನೀಡಿದರು.
ಜಿಲ್ಲಾ ಕೇಂದ್ರದಲ್ಲಿ ಈ ರೀತಿಯ ವಿಶೇಷ ಚಿಕಿತ್ಸಾ ಇದ್ದರೂ ಕೂಡ ಮಾಹಿತಿ ಕೊರತೆಯಿಂದಾಗಿ ಇಲ್ಲಿ ಹೆಸರು ನೋಂದಾಯಿಸುವವರ ಸಂಖ್ಯೆ ಕಡಿಮೆಯಾಗಿದೆ. ಮಹಿಳೆಯರೇ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದು, ದೌರ್ಜನ್ಯಕ್ಕೊಳಗಾದವರು, ಸಂತ್ರಸ್ತೆಯರು ಈ ಘಟಕದ ಪ್ರಯೋಜನ ಪಡೆದುಕೊಳ್ಳಬಹುದು. ಈ ನಿಟ್ಟಿನಲ್ಲಿ ನೋಂದಾಯಿಸಿಕೊಳ್ಳಲು ದೂರವಾಣಿ 08272-225444 ಅನ್ನು ಸಂಪರ್ಕಿಸಬಹುದಾಗಿದೆ.
-ಸಂತೋಷ್