ಮಡಿಕೇರಿ, ಡಿ. 5: ಜಿಲ್ಲೆಯ ಶಾಲಾ ಮಕ್ಕಳಿಗೆ ಶೈಕ್ಷಣಿಕ ಮತ್ತು ಸಾಂಸ್ಕøತಿಕ ಚಲನಚಿತ್ರ ಪ್ರದರ್ಶನ ಏರ್ಪಡಿಸುವ ಸಂಬಂಧ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಭೆ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿಯವರು ಮಕ್ಕಳಿಗೆ ಮತ್ತು ಪೋಷಕರ ಮೇಲೆ ಯಾವದೇ ಒತ್ತಡ ಹೇರದೆ ಆಸಕ್ತ ಮಕ್ಕಳಿಗೆ ಚಲನಚಿತ್ರ ವೀಕ್ಷಣೆಗೆ ಅನುವು ಮಾಡಿಕೊಡಬೇಕು. ಮಕ್ಕಳನ್ನು ಸುರಕ್ಷಿತವಾಗಿ ಚಲನಚಿತ್ರ ಪ್ರದರ್ಶನಕ್ಕೆ ಕರೆದುಕೊಂಡು ಹೋಗಿ ಬರುವ ಜವಾಬ್ದಾರಿಯು ಸಂಬಂಧಪಟ್ಟ ಶಾಲೆಯ ಮುಖ್ಯೋಪಾಧ್ಯಾಯರದ್ದಾಗಿರುತ್ತದೆ ಎಂದು ತಿಳಿಸಿದರು.
ಸಂಬಂಧಪಟ್ಟ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು ಚಲನಚಿತ್ರ ಪ್ರದರ್ಶನಕ್ಕೂ ಮುನ್ನ ಚಿತ್ರ ಮಂದಿರಗಳಲ್ಲಿ ಸುರಕ್ಷತಾ ಮಾನದಂಡಗಳನ್ನು ಪರಿಶೀಲಿಸಿ ಮಕ್ಕಳ ಸುರಕ್ಷತೆಯ ಬಗ್ಗೆ ಗಮನ ಹರಿಸುವಂತೆ ಸಂಬಂಧಪಟ್ಟ ಶಿಕ್ಷಣ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಡಿಕೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ ಮಾತನಾಡಿ, 6ನೇ ತರಗತಿಯಿಂದ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳನ್ನು ಪ್ರದರ್ಶನಕ್ಕೆ ಕಳುಹಿಸಿಕೊಡಲಾಗುವದು ಎಂದು ಮಾಹಿತಿ ನೀಡಿದರು.
ಕರ್ನಾಟಕ ಶೈಕ್ಷಣಿಕ ಮತ್ತು ಸಾಂಸ್ಕøತಿಕ ಮಕ್ಕಳ ಚಿತ್ರ ಸಂಸ್ಥೆಯ ವ್ಯವಸ್ಥಾಪಕ ಎಸ್. ರಮೇಶ್ ಮಾತನಾಡಿ, ಶಿಕ್ಷಣ ಇಲಾಖೆಯ ಒಪ್ಪಿಗೆ ಮೇರೆಗೆ ‘ಎಳೆಯರು ನಾವು ಗೆಳೆಯರು’ ಚಿತ್ರವನ್ನು ತಾ. 13 ರಿಂದ 19 ವರೆಗೆ 6 ದಿನಗಳ ಕಾಲ ಬೆಳಿಗ್ಗೆ 8 ರಿಂದ 10 ಗಂಟೆಯವರೆಗೆ ಮಡಿಕೇರಿಯ ಕಾವೇರಿ ಮಹಲ್ ಚಿತ್ರ ಮಂದಿರ, ಸಿದ್ದಾಪುರದ ಊಡ್ ಲ್ಯಾಂಡ್ ಚಿತ್ರಮಂದಿರ, ಶನಿವಾರಸಂತೆಯ ಯಶಸ್ವಿನಿ ಚಿತ್ರಮಂದಿರ, ಸುಂಟಿಕೊಪ್ಪದ ಗಣೇಶ್ ಚಲನಚಿತ್ರ ಮಂದಿರಗಳಲ್ಲಿ ಚಿತ್ರ ಪ್ರದರ್ಶನ ನಡೆಸಲಾಗುವದು ಹಾಗೂ ಪ್ರತಿ ವಿದ್ಯಾರ್ಥಿಗೆ ರೂ. 15 ದರ ನಿಗದಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಕುಶಾಲನಗರ ವ್ಯಾಪ್ತಿಯಲ್ಲಿ ಶಾಲೆಗಳ ಸಂಖ್ಯೆ ಹೆಚ್ಚಿರುವದರಿಂದ ಕುಶಾಲನಗರದ ಕೂರ್ಗ್ ಸಿನಿ ಪ್ಲೇಕ್ಸ್ ಚಿತ್ರ ಮಂದಿರದಲ್ಲಿ ತಾ. 13 ರಿಂದ ಬೆಳಿಗ್ಗೆ 8 ರಿಂದ 10 ಗಂಟೆಯವರೆಗೆ 10 ದಿನಗಳ ಕಾಲ ಚಲನಚಿತ್ರ ಪ್ರದರ್ಶನ ನಡೆಯಲಿದೆ ಎಂದು ಸಭೆಗೆ ತಿಳಿಸಿದರು. ಸಭೆಯಲ್ಲಿ ಜಿಲ್ಲೆಯ ಚಿತ್ರ ಮಂದಿರಗಳ ಮಾಲೀಕರು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಇತರರು ಇದ್ದರು.