ಮಡಿಕೇರಿ, ಡಿ. 5: ಸಾರ್ವಜನಿಕ ಶಿಕ್ಷಣ ಇಲಾಖೆ ಸಮಗ್ರ ಶಿಕ್ಷಣ ಕರ್ನಾಟಕ ವೃತ್ತಿ ಶಿಕ್ಷಕರ ಸಂಘ ಕೊಡಗು ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಕೊಡಗು ಜಿಲ್ಲಾಮಟ್ಟದ ವೃತ್ತಿ ಶಿಕ್ಷಣ ಕಲಿಕೋತ್ಸವ ಕಾರ್ಯಕ್ರಮ ಮಡಿಕೇರಿಯ ಸರಕಾರಿ ಪದವಿಪೂರ್ವ ಕಾಲೇಜಿನ ಅವರಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪೆರಿಗ್ರಿನ್ ಮಚ್ಚಾಡೋ ಗಿಡಕ್ಕೆ ನೀರು ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಶಾಲೆಗಳಲ್ಲಿ ಟೈಲರಿಂಗ್ ಕಲಿಯುವ ಮೂಲಕ ಮನೆಗಳಲ್ಲಿ ಹೊಲಿಗೆ ಯಂತ್ರ ಇದ್ದಲ್ಲಿ ಪದೇ ಪದೇ ಟೈಲರ್ ಬಳಿ ಹೋಗುವ ಅವಶ್ಯಕತೆ ಇರುವದಿಲ್ಲ ನಾವೇ ಹರಿದ ಬಟ್ಟೆಗಳನ್ನು ಮನೆಯಲ್ಲಿ ಹೊಲಿದುಕೊಳ್ಳಬಹುದು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು. ನಂತರ ಶಾಲಾ ಮಕ್ಕಳು ತಯಾರಿಸಿದ ವಿವಿಧ ವಸ್ತುಗಳ ಮಾದರಿಗಳ ವಸ್ತು ಪ್ರದರ್ಶನವನ್ನು ಉದ್ಘಾಟಿಸಿದರು.
ವೇದಿಕೆಯಲ್ಲಿ ವೀರಾಜಪೇಟೆ ಕ್ಷೇತ್ರ ಶಿಕ್ಷಣಾದಿಕಾರಿ ಶ್ರೀಶೈಲ ಬಿಳಗಿ, ಜಿಲ್ಲಾ ದೈಹಿಕ ಶಿಕ್ಷಣ ಆದೀಕ್ಷಕ ವೆಂಕಟೇಶ, ವೃತ್ತಿ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ಜೆಮ್ಮಿ ಸ್ವೀಕೆರಾ ಶಿಕ್ಷಣಾಧಿಕಾರಿ ಕಾಶೀನಾಥ್ ಸ.ಪ.ಪೂ. ಕಾಲೇಜಿನ ಪ್ರಾಂಶುಪಾಲ ವಿಜಯನ್ ಇದ್ದರು. ವೃತ್ತಿ ಶಿಕ್ಷಣ ಕಲಕೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲೆಯ ಸರಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳ ವೃತ್ತಿ ಶಿಕ್ಷಕರು ಹಾಗೂ ಟೈಲರಿಂಗ್ ಶಿಕ್ಷಕರು ತಾವು ತಯಾರಿಸಿದ ವಿವಿಧ ಮಾದರಿಗಳೊಂದಿಗೆ ಎರಡು ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.