ಮಡಿಕೇರಿ, ಡಿ. 5: ವಿದ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವದರೊಂದಿಗೆ ಪತ್ರಿಕೆ, ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕೆಂದು ಅತಿಥಿ ಗಣ್ಯರು ಕರೆ ನೀಡಿದರು.

ಇಲ್ಲಿಗೆ ಸನಿಹದ ಮದೆನಾಡಿನ ಮದೆ ಮಹೇಶ್ವರ ಪ.ಪೂ. ಕಾಲೇಜಿನ ಪೋಷಕ-ವಿದ್ಯಾರ್ಥಿಗಳ ಸಭೆ ಹಾಗೂ ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಎನ್. ಮಹಾಬಲೇಶ್ವರ ಭಟ್ ದತ್ತಿ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಮಾತನಾಡಿ ಸುಂದರ ಪರಿಸರದಲ್ಲಿರುವ ಶಾಲೆಯ ವಿದ್ಯಾರ್ಥಿಗಳ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ ಆಡಳಿತ ಮಂಡಳಿ ಹಾಗೂ ಪೋಷಕರ ಸಹಕಾರವನ್ನು ಶ್ಲಾಘಿಸಿದರು. ಮಾತೃಭಾಷೆಯನ್ನು ಪ್ರೀತಿಸುವದರೊಂದಿಗೆ ಕನ್ನಡ ಭಾಷೆಗೆ ಗೌರವ ನೀಡಬೇಕು. ಸಾಹಿತ್ಯ, ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕೆಂದು ಹೇಳಿದರು. ಮತ್ತೋರ್ವ ಅತಿಥಿ ಡಿ.ವೈ.ಎಸ್.ಪಿ ಬಾರಿಕೆ ದಿನೇಶ್ ಕುಮಾರ್ ಮಾತನಾಡಿ ವಿದ್ಯಾರ್ಥಿ ದಿಸೆಯಿಂದಲೇ ಕಾನೂನಿನ ಬಗ್ಗೆ ತಿಳಿದುಕೊಳ್ಳಬೇಕು. ಶೋಕಿಗೋಸ್ಕರ ಕಾನೂನು ಉಲ್ಲಂಘನೆ ಮಾಡ ಬಾರದು. ಮಕ್ಕಳ ರಕ್ಷಣೆಗಾಗಿಯೇ ಪ್ರತ್ಯೇಕ ಕಾನೂನುಗಳಿವೆ ಅವುಗಳ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕೆಂದು ಹೇಳಿದರು. ಪೊಲೀಸ್ ಇಲಾಖೆಯಲ್ಲಿ ಸೇವೆಗೆ ಉತ್ತಮ ಅವಕಾಶಗಳಿವೆ. ಸದುಪಯೋಗ ಪಡಿಸಿಕೊಳ್ಳಬೇಕು. ಓದಿನೊಂದಿಗೆ ಇತರ ಚಟುವಟಿಕೆ ಗಳಲ್ಲೂ ತೊಡಗಿಸಿಕೊಳ್ಳುವಂತೆ ಸಲಹೆ ಮಾಡಿದರು.

ತಾಲೂಕು ಕ.ಸಾ.ಪ ಅಧ್ಯಕ್ಷ ಕುಡೆಕಲ್ ಸಂತೋಷ್ ಮಾತನಾಡಿ ಪ್ರೌಢಾವಸ್ಥೆಯು ವಿದ್ಯಾರ್ಥಿಗಳಲ್ಲಿ ಜ್ಞಾನಾರ್ಜನೆಗೆ ಸಕಾಲವಾಗಿದೆ. ಈ ಹಂತದಲ್ಲಿ ಕಲಿಯುವ ವಿಚಾರಗಳು ಭವಿಷ್ಯದಲ್ಲಿ ನೆರವಾಗಲಿದೆ ಎಂದರು. ವಿದ್ಯಾರ್ಥಿಗಳು ಪ್ರತಿನಿತ್ಯ ಪತ್ರಿಕೆಗಳನ್ನು ಓದುವದರಿಂದ ಸಾಕಷ್ಟು ವಿಚಾರಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಜೊತೆಯಲ್ಲಿ ಬರಹ, ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ ಹೊರ ಪ್ರಪಂಚದಲ್ಲಿ ಗುರುತಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು. ಇದರೊಂದಿಗೆ ಎನ್. ಮಹಾಬಲೇಶ್ವರ ಭಟ್ ದತ್ತಿ ಕುರಿತು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಹುದೇರಿ ರಾಜೇಂದ್ರ ಅವರು ವಿದ್ಯಾರ್ಥಿಗಳು ಸಿಕ್ಕ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಪಠ್ಯ ಅಭ್ಯಸಿಸುವದ ರೊಂದಿಗೆ ಬೇರೆ ಪುಸ್ತಕಗಳನ್ನು ಕೂಡ ಓದಬೇಕು. ಸಾಧನೆ ಮಾಡುವದರೊಂದಿಗೆ ಶಾಲೆಗೆ, ನಾಡಿಗೆ ಕೀರ್ತಿ ತರಬೇಕೆಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕಾಲೇಜು ಪ್ರಾಂಶುಪಾಲೆ ತೆಕ್ಕಡೆ ಗುಲಾಬಿ ಜನಾರ್ಧನ್ ವಿದ್ಯಾರ್ಥಿಗಳು ವರ್ಷಂಪ್ರತಿ ಉತ್ತಮ ಫಲಿತಾಂಶ ತಂದುಕೊಡುತ್ತಿದ್ದಾರೆ. ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸಿ ಸಾಧನೆ ತೋರುತ್ತಿರುವ ಬಗ್ಗೆ ತಿಳಿಸಿದರು. ಆಡಳಿತ ಮಂಡಳಿ ಕಾರ್ಯದರ್ಶಿ ಬಿ.ಸಿ. ಚೆನ್ನಪ್ಪ, ನಿರ್ದೇಶಕ ಹುಲಿಮನೆ ರಾಮಣ್ಣ ಅವರುಗಳು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಈ ಸಂದರ್ಭ ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಕ್ರೀಡೆ, ಸ್ಫರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ನಂತರ ಪೋಷಕರ ಹಾಗೂ ವಿದ್ಯಾರ್ಥಿಗಳ ಸಭೆ ನಡೆಯಿತು. ಉಪನ್ಯಾಸಕರು, ಪೋಷಕರು ಭಾಗವಹಿಸಿದ್ದರು. ವಿದ್ಯಾರ್ಥಿನಿ ಯರಾದ ಮೇಘನ, ಇಂಚರ, ಧನ್ಯಶ್ರೀ ಪ್ರಾರ್ಥಿಸಿದರೆ, ಉಪನ್ಯಾಸಕ ಪರಶು ರಾಮ ನಿರೂಪಿಸಿ, ವಂದಿಸಿದರು.