ಗೋಣಿಕೊಪ್ಪ ವರದಿ, ಡಿ. 5: ಪ್ರಪಂಚದ 110 ದೇಶಗಳಲ್ಲಿ ಈಗಾಗಲೇ 1 ಕೋಟಿಗೂ ಅಧಿಕ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ ಎಂದು ಲಯನ್ಸ್ ಕ್ಲಬ್ ಜಿಲ್ಲಾ ದ್ವಿತೀಯ ಗವರ್ನರ್ ವಸಂತ್ ಕುಮಾರ್ ಶೆಟ್ಟಿ ಹೇಳಿದರು.
ಲಯನ್ಸ್ ಕ್ಲಬ್ ಇಂಟರ್‍ನ್ಯಾಷನಲ್ ಹಾಗೂ ಗೋಣಿಕೊಪ್ಪ ಲಯನ್ಸ್ ಕ್ಲಬ್ ವತಿಯಿಂದ ದುರ್ಗಬೋಜಿ ಸಭಾಂಗಣದಲ್ಲಿ ಆಯೋಜಿಸಿದ್ದ ಲಯನ್ಸ್ ಕ್ವೆಸ್ಟ್ ಶಿಕ್ಷಕರ ವಿಶೇಷ ತರಬೇತಿ ಕಾರ್ಯಾಗಾರದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿ, ಲಯನ್ಸ್ ಸಂಸ್ಥೆ ಶಿಕ್ಷಕರಿಗೆ ತರಬೇತಿ ಕಾರ್ಯಾಗಾರ ನಡೆಸುತ್ತಿದೆ. ಪ್ರಪಂಚದ 110 ದೇಶಗಳಲ್ಲಿ ಈಗಾಗಲೇ 1 ಕೋಟಿಗೂ ಅಧಿಕ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ಅನುಷ್ಠಾನಕ್ಕೆ ಶಿಕ್ಷಕರು ಮನಸ್ಸು ಮಾಡಬೇಕು. ಮಕ್ಕಳು ಪಾಲಕರ ಮಾತಿಗಿಂತ ಹೆಚ್ಚು ಬೋಧಕರ ಮಾತಿಗೆ ಮನ್ನಣೆ ನೀಡುತ್ತಿರುವದರಿಂದ ಬೋಧಕರು ಮಕ್ಕಳಲ್ಲಿನ ನ್ಯೂನ್ಯತೆ ಮತ್ತು ಅವರ ಬೆಳವಣಿಗೆಗೆ ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕಿದೆ. ಮಕ್ಕಳಲ್ಲಿನ ಒತ್ತಡ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವದರಿಂದ ಶಿಕ್ಷಕರು ಧನಾತ್ಮಕ ಚಿಂತನೆಯಲ್ಲಿ ಮಕ್ಕಳ ಮನಸ್ಸನ್ನು ಹಗುರಗೊಳಿಸಬೇಕಿದೆ ಎಂದರು.
ಲಯನ್ಸ್ ಕ್ಲಬ್ ತರಬೇತುಗಾರ್ತಿ ಕವಿತಾ ಶಾಸ್ತ್ರಿ ಮಾತನಾಡಿ, ಬೋಧಕರು ವಿದ್ಯಾರ್ಥಿಗಳ ಪ್ರಶ್ನೆ ಆಲಿಸುವ ಗುಣ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳ ಪ್ರಶ್ನೆಗೂ ಉತ್ತರ ದೊರೆಯುವ ಅವಕಾಶಕ್ಕೆ ಶಿಕ್ಷಕರು ಸ್ಪಂದನ ನೀಡಬೇಕಿದೆ. ಮಕ್ಕಳಲ್ಲಿನ ಧನಾತ್ಮಕ ಮತ್ತು ಋಣಾತ್ಮಕ ಚಿಂತನೆಯನ್ನು ಅರಿತು ತಿದ್ದಿ ಬೆಳೆಸಲು ಪಾಲಕರಷ್ಟೆ ಕಾಳಜಿ ಶಿಕ್ಷಕರು ಮೈಗೂಡಿಸಿಕೊಳ್ಳಬೇಕು ಎಂದರು.
ಈ ಸಂದರ್ಭ ಗೋಣಿಕೊಪ್ಪ ಲಯನ್ಸ್ ಕ್ಲಬ್ ಅಧ್ಯಕ್ಷ ನಿತಿ ಪೂಣಚ್ಚ, ಕಾರ್ಯದರ್ಶಿ ಡಾ. ಅಮ್ಮಂಡ ಚಿಣ್ಣಪ್ಪ, ಖಜಾಂಚಿ ಅಲ್ಲುಮಾಡ ಸುನಿಲ್, ಕಾರ್ಯಕ್ರಮ ಸಂಚಾಲಕಿ ರತ್ನ ಚರ್ಮಣ ಉಪಸ್ಥಿತರಿದ್ದರು.