ಅಷ್ಟಮಂಗಲ ಪ್ರಶ್ನೆಯಲ್ಲಿ ವಿಮರ್ಶೆ

ಮಡಿಕೇರಿ, ಡಿ. 5: ನಗರದ ಶ್ರೀ ಮುತ್ತಪ್ಪ ದೇವಾಲಯ ಸನ್ನಿಧಿಯು ಬೇಡಿಕೊಂಡು ಬರುವ ಭಕ್ತರಿಗೆ ಸದಾ ಬೆಂಗಾವಲಾಗಿದ್ದು, ಪ್ರಸ್ತುತ ಇರುವ ಕರ್ಮದೋಷ, ನೈವೇದ್ಯಲೋಪ, ಧನನಾಶ, ಶಾಪ-ತಾಪಗಳನ್ನು ನಿವಾರಿಸಿಕೊಂಡರೆ ಎಲ್ಲರಿಗೂ ಒಳ್ಳಯದೆ ಎಂದು ಸನ್ನಿಧಿಯಲ್ಲಿ ನಡೆಯುತ್ತಿರುವ ಅಷ್ಟಮಂಗಲ ಪ್ರಶ್ನೆ ವೇಳೆ ದೈವಜ್ಞರು ವಿಮರ್ಶಿಸಿದ್ದಾರೆ. ಇಂದು ಮುಂದುವರಿದ ಪ್ರಶ್ನೆಫಲದಲ್ಲಿ ಗೋಚರ ವಿಷಯಗಳನ್ನು ಚರ್ಚಿಸಲಾಯಿತು.

ಶ್ರೀ ಮುತ್ತಪ್ಪನಿಗೆ ಗುಡಿ ನಿರ್ಮಾಣ ಕಾಲಘಟ್ಟವೂ ಸೇರಿದಂತೆ ದಾನಿಗಳಿಂದ ಅಭಿವೃದ್ಧಿ ನಿಮಿತ್ತ ಆರ್ಥಿಕ ಸಂಪತ್ತು ಕ್ರೋಡೀಕರಿಸುವಲ್ಲಿ ಸಾಕಷ್ಟು ತಪ್ಪುಗಳು ಆಡಳಿತ ವ್ಯವಸ್ಥೆಯಿಂದ ಕಂಡುಬಂದಿದೆ ಎಂದ ದೈವಜ್ಞರು ಯಾವದೇ ದೇವನೆಲೆಗಳಿಗೆ ಬಲವಂತದ ಸಂಗ್ರಹ ಸನ್ನಿಧಿ ದೇವತೆಗಳಿಗೆ ಸಮ್ಮತವಲ್ಲವೆಂದು ತಿಳಿ ಹೇಳಿದರು.

ಅಲ್ಲದೆ ದೇವಾಲಯಗಳ ನಿರ್ಮಾಣಕ್ಕೆ ಮುಂದಾಗುವ ವೇಳೆ ಪರಸ್ಪರರಲ್ಲಿ ನಂಬಿಕೆಯೊಂದಿಗೆ ನಿರ್ಮಲ ಮನಸ್ಸಿನಿಂದ ಆಡಳಿತ ವರ್ಗ, ಅರ್ಚಕ ಬಳಗ, ಭಕ್ತಜನರು ಕ್ಷೇತ್ರ ತಂತ್ರಿಗಳ ಮಾರ್ಗದರ್ಶದಲ್ಲಿ ದೈವಾಜ್ಞೆಯಂತೆ ಮುನ್ನಡೆಯುವದು ಅವಶ್ಯಕ ಎಂದು ನೆನಪಿಸಿದರು.

ಶ್ರೀ ಮುತ್ತಪ್ಪನಿಗೆ ಮತ್ತು ಎಲ್ಲ ಪರಿವಾರ ದೇವಾಲಯ ಸನ್ನಿಧಿಗಳಿಗೆ ನಿತ್ಯ ನೈವೇದ್ಯ ಹಾಗೂ ಪರ್ವಕಾಲ ಸೇವೆಗಳಲ್ಲಿ ಭಕ್ತರು ನೀಡುವ ದ್ರವ್ಯಾದಿಗಳನ್ನು ಶ್ರದ್ಧೆಯಿಂದ ಹೊಂದಿಕೊಳ್ಳಬೇಕೆಂದು ನೆನಪಿಸುತ್ತಾ, ದೇವನೆಲೆಗಳಲ್ಲಿ ಭಕ್ತರು, ಸ್ತ್ರೀಯರು ದುಃಖಕ್ಕೆ ಗುರಿಯಾಗದಂತೆ ಆಡಳಿತ ಮುಖ್ಯಸ್ಥರು ಕಾಳಜಿ ಹೊಂದಿರುವಂತೆ ಸಲಹೆ ನೀಡಿದರು. ಸನ್ನಿಧಿ ತಂತ್ರಿಗಳು, ದೈವಜ್ಞರೊಂದಿಗೆ ದೇವಾಲಯ ಸಮಿತಿ ಪ್ರಮುಖರು, ಸದ್ಭಕ್ತರು ಪ್ರಶ್ನೆಯಲ್ಲಿ ಪಾಲ್ಗೊಂಡಿದ್ದರು. ತಾ 6ರಂದು (ಇಂದು) ಕೂಡ ಪ್ರಶ್ನೆ ಮುಂದುವರೆಯಲಿದೆ.