ಸೋಮವಾರಪೇಟೆ, ಡಿ.5: ಚಾಲಕನ ನಿಯಂತ್ರಣ ತಪ್ಪಿದ ಆಟೋ ರಿಕ್ಷಾವೊಂದು ಪಟ್ಟಣದ ವಿವೇಕಾನಂದ ವೃತ್ತದ ಬಳಿ ಪಲ್ಟಿಯಾದ ಪರಿಣಾಮ, ಆಟೋದಲ್ಲಿದ್ದ ನಾಲ್ವರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಇಂದು ಮಧ್ಯಾಹ್ನ ನಡೆದಿದೆ.
ಬಜೆಗುಂಡಿ ಗ್ರಾಮದ ಆಟೋ ಚಾಲಕ ಮಂಜುನಾಥ್ ಅವರು ಮೂವರು ಪ್ರಯಾಣಿಕರನ್ನು ಪಟ್ಟಣದಿಂದ ಬಜೆಗುಂಡಿ ಕಡೆಗೆ ಸಾಗಿಸುತ್ತಿದ್ದ ಸಂದರ್ಭ ವಿವೇಕಾನಂದ ವೃತ್ತದ ಬಳಿ ದಿಢೀರಾಗಿ ಆಟೋ ಪಲ್ಟಿಯಾಗಿದ್ದು,ರಸ್ತೆಯ ಒಂದು ಬದಿಗೆ ಬಿದ್ದಿದೆ.
ಪರಿಣಾಮ ಆಟೋದೊಳಗಿದ್ದ ಚಾಲಕ ಮಂಜುನಾಥ್ನ ಭುಜ, ಬಜೆಗುಂಡಿ ಗ್ರಾಮದ ಅನಿತ ಅವರ ಕುತ್ತಿಗೆ, ಜಯಮ್ಮ ಅವರ ಬಲಗೈ, ಕೋವರ್ಕೊಲ್ಲಿ ಎಸ್ಟೇಟ್ನ ಅಬ್ಬಾಸ್ ಅವರ ಎದೆಯ ಭಾಗಕ್ಕೆ ಪೆಟ್ಟಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆ ನಡೆದ ತಕ್ಷಣ ಸ್ಥಳೀಯರು ಗಾಯಾಳುಗಳ ನೆರವಿಗೆ ಧಾವಿಸಿದ್ದು, ಎಲ್ಲರನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.