ಕೂಡಿಗೆ, ಡಿ. 5: ಪರಿಸರವನ್ನು ಸ್ವಚ್ಛವಾಗಿಡುವ ನಿಟ್ಟಿನಲ್ಲಿ ಪೇಪರ್ ಮರು ಬಳಕೆಯ ಕುರಿತು ಕೂಡಿಗೆಯ ಆಂಜೆಲಾ ಶಾಲಾ ವಿದ್ಯಾರ್ಥಿಗಳು ಕೂಡಿಗೆಯಲ್ಲಿ ಜಾಗೃತಿ ಜಾಥಾ ನಡೆಸಿದರು.

ಕೂಡಿಗೆ ಅಂಗಡಿಗಳು, ಆಟೋ ನಿಲ್ದಾಣ ಹಾಗೂ ಸಾರ್ವಜನಿಕರಿಗೆ ಕರಪತ್ರಗಳನ್ನು ಹಂಚಿ ಪೇಪರ್ ಮರುಬಳಕೆಯ ಬಗ್ಗೆ ಜಾಗೃತಿ ಮೂಡಿಸಿದರು.

ಅಲ್ಲದೆ ಔಷಧೀಯ ಸಸ್ಯಗಳಿಗೆ ಪ್ರಾಮುಖ್ಯತೆ ನೀಡುವ ಸಲುವಾಗಿ ಸಾಮಾನ್ಯವಾಗಿ ಕರೆಯಲ್ಪಡುವ ಟಿಂಚರ್ ಸಸ್ಯ(ಎಮಿಗ್ರಾಫಿಸೆ ಕೊಲರೆಟಾ) ದ ಕುರಿತು ಅರಿವನ್ನು ಮೂಡಿಸಿದರು. ಈ ಸಸ್ಯವು ಬಹು ಉಪಯೋಗಿ ಔಷಧೀಯ ಸಸ್ಯವಾಗಿದ್ದು, ದೇಹದ ಗಾಯಗಳಿಗೆ ಹಚ್ಚಿದರೆ ಗಾಯವು ವಾಸಿಯಾಗುವ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡು, ವೈದ್ಯಕೀಯವಾಗಿ ಈ ಸಸ್ಯವನ್ನು ಅಭಿವೃದ್ಧಿ ಪಡಿಸಿದರೆ, ಜನರಿಗೆ ಉಪಯೋಗವಾಗುವದು ಎಂದು ಸಾರ್ವಜನಿಕರಲ್ಲಿ ಮನವರಿಕೆ ಮಾಡಿದರು. ಮುಖ್ಯೋಪಾಧ್ಯಾಯಿನಿ ವೀಣಾ ವಿಜಯ್, ಶಿಕ್ಷಕಿ ಜೋಸ್ಮಿ, ವಿದ್ಯಾರ್ಥಿಗಳಾದ ರಚನ, ಸ್ವಾತಿ, ಜಯಲಕ್ಷ್ಮಿ, ಖುಷಿ ಸೇರಿದಂತೆ 25ಕ್ಕೂ ಅಧಿಕ ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು.