ಕರಿಕೆ, ಡಿ. 4: ಕರಿಕೆ ವಲಯ ಕಾಂಗ್ರೆಸ್ ವತಿಯಿಂದ ಭಾಗಮಂಡಲ -ಕರಿಕೆ ರಸ್ತೆ ಅವ್ಯವಸ್ಥೆ ಕುರಿತು ಕರಿಕೆಯಲ್ಲಿ ಬಂದ್ ಆಚರಿಸಲಾಯಿತು. ಬೆಳಿಗ್ಗೆ ಬಲತ್ಕಾರವಾಗಿ ಬಂದ್ ಮಾಡಿಸಲು ಮುಂದಾದ ಕಾಂಗ್ರೆಸ್ ಕಾರ್ಯಕರ್ತರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ ಘಟನೆಯೂ ನಡೆಯಿತು. ರಸ್ತೆ ತಡೆ ಮಾಡಿದ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮಾನಾಥ್ ಅವರನ್ನು ಪೊಲೀಸರು ಬಂಧಿಸಿ ಬಳಿಕ ಬಿಡುಗಡೆ ಮಾಡಿದರು.ಕೆಲದಿನಗಳಿಂದ ಬಂದ್ ಆಯೋಜಕರು ಅಂಗಡಿ ಮುಂಗಟ್ಟು ಹಾಗೂ ಬಸ್, ವಾಹನಗಳ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಲು ಮನವಿ ಮಾಡಿದ್ದರು. ಆದರೆ ವ್ಯಾಪಾರ ವಹಿವಾಟು, ಬಸ್ ಸಂಚಾರ ಮಾತ್ರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು.ಮಧ್ಯಾಹ್ನ ನಂತರ ಕೆಲವು ಅಂಗಡಿ (ಮೊದಲ ಪುಟದಿಂದ) ಮುಂಗಟ್ಟುಗಳು ತೆರೆಯಲ್ಪಟ್ಟವು. ಖಾಸಗಿ ವಾಹನ ಸಂಚಾರ ಎಂದಿನಂತಿತ್ತು. ಬೆಳಿಗ್ಗೆ ಶಾಲಾ ಮಕ್ಕಳು, ಕೂಲಿಕಾರ್ಮಿಕರು ವಾಹನವಿಲ್ಲದೆ ಪರದಾಡುವಂತಾಗಿತ್ತು.ಗ್ರಾಮ ಪಂಚಾಯತಿ, ಸಹಕಾರ ಸಂಘಗಳನ್ನು ಬಲಾತ್ಕಾರ ಮುಚ್ಚಿಸಲಾಗುತ್ತಿದ್ದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರಿಂದ ಅವುಗಳು ತೆರೆಯಲ್ಪಟ್ಟವು. ಎರಡು ಗಂಟೆಗೆ ಕರಿಕೆ-ಸುಳ್ಯ ಸಂಚರಿಸುವ ಖಾಸಗಿ ಬಸ್‍ಗೆ ತಡೆಯೊಡ್ಡಿದಾಗ ಗ್ರಾಮಸ್ಥರು ಹಾಗೂ ಬಿಜೆಪಿ ಮುಖಂಡರು ಮಧ್ಯ ಪ್ರವೇಶಿಸಿ ಬಸ್ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಈ ಸಂದರ್ಭ ಪಂಚಾಯತಿ ಅಧ್ಯಕ್ಷರು ಹಾಗೂ ಭಾಜಪ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು.
ನಂತರ ಪೊಲೀಸರು ಮಧ್ಯಪ್ರವೇಶದಿಂದ ಪರಿಸ್ಥಿತಿ ತಿಳಿಯಾಯಿತು. ಗ್ರಾಮಾಂತರ ವೃತ್ತ ನಿರೀಕ್ಷಕ ದಿವಾಕರ ನೇತೃತ್ವದಲ್ಲಿ ಭಾಗಮಂಡಲ ಠಾಣಾಧಿಕಾರಿ ಮಹದೇವ ಅವರನ್ನೊಳಗೊಂಡು ಒಂದು ಸಶಸ್ತ್ರ ಮೀಸಲು ಪಡೆ ಸಹಿತ ಬಂದೋಬಸ್ತ್ ಕಲ್ಪಿಸಲಾಗಿತ್ತು.
ಗ್ರಾಮ ಪಂಚಾಯತಿ ಅಧ್ಯಕ್ಷ ಬಾಲಚಂದ್ರ ನಾಯರ್, ವಲಯ ಕಾಂಗ್ರೆಸ್ ಅಧ್ಯಕ್ಷ ಬೇಕಲ್ ದೇವರಾಜ್, ಪಂಚಾಯಿತಿ ಸದಸ್ಯ ರಮಾನಾಥ, ಹರಿಪ್ರಸಾದ್, ವಿ.ಎಸ್.ಎಸ್.ಎನ್. ಅಧ್ಯಕ್ಷ ಶರಣ್ ಕುಮಾರ್ ಸೇರಿದಂತೆ ಹಲವು ಕಾರ್ಯಕರ್ತರು ಪಾಲ್ಗೊಂಡಿದ್ದರು. -ಸುಧೀರ್