ಸೋಮವಾರಪೇಟೆ, ಡಿ.4: ಅರಣ್ಯದ ಅಂಚಿನಲ್ಲಿ ಮೇಯಲು ಬಿಟ್ಟಿದ್ದ ಜಾನುವಾರಿನ ಮೇಲೆ ಹುಲಿ ದಾಳಿ ನಡೆಸಿರುವ ಘಟನೆ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ.
ಹುಲಿ ದಾಳಿಯಿಂದ ಜಾನುವಾರಿನ ಕುತ್ತಿಗೆ ಭಾಗಕ್ಕೆ ಗಂಭೀರ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದೆ. ಬಾಣಾವರ ಮೀಸಲು ಅರಣ್ಯಕ್ಕೆ ಒಳಪಡುವ ಆಡಿನಾಡೂರು ಅರಣ್ಯದ ಹೊಸಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಸ್ಥಳೀಯರು ಭಯಭೀತರಾಗಿದ್ದಾರೆ.
ಹೊಸಳ್ಳಿ ಗ್ರಾಮದ ವೆಂಕಟೇಶ್ ಅವರಿಗೆ ಸೇರಿದ ಹಸುವನ್ನು ಮೇಯಲು ಬಿಡಲಾಗಿತ್ತು. ರಾತ್ರಿ ವೇಳೆಯಲ್ಲಿ ಅರಣ್ಯದ ಅಂಚಿನಲ್ಲಿಯೇ ಇದ್ದ ಜಾನುವಾರಿನ ಮೇಲೆ ಹುಲಿ ದಾಳಿ ನಡೆಸಿದೆ. ಈ ಸಂದರ್ಭ ಹುಲಿ ಯಿಂದ ತಪ್ಪಿಸಿಕೊಂಡು ಬಂದಿರುವ ಹಸು, ರಸ್ತೆಯಲ್ಲಿ ಕುಸಿದು ಬಿದ್ದಿದೆ.
ನಾಯಿಗಳು ಬೊಗಳುತ್ತಿದ್ದ ಶಬ್ದಕ್ಕೆ ನೆರೆಮನೆಯ ಶಿವಣ್ಣ ಅವರು ಹೊರಬಂದು ನೋಡಿದ ಸಂದರ್ಭ, ಹಸುವಿನ ಕುತ್ತಿಗೆ ಭಾಗಕ್ಕೆ ಗಂಭೀರ ಗಾಯವಾಗಿರುವದು ಕಂಡುಬಂದಿದೆ. ಕಳೆದ ಕೆಲ ದಿನಗಳ ಹಿಂದೆಯೂ ಈ ವ್ಯಾಪ್ತಿಯಲ್ಲಿ ಹುಲಿ ಪ್ರತ್ಯಕ್ಷಗೊಂಡಿದ್ದು, ಸ್ಥಳೀಯರು ಭಯಭೀತರಾಗಿದ್ದಾರೆ.