ಮಡಿಕೇರಿ, ಡಿ. 4: ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಪ್ರತೀ ತಿಂಗಳು 5ನೇ ತಾರೀಕಿನೊಳಗೆ ಗೌರವ ಧನವನ್ನು ಪಾವತಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಸಂಘದ ಮಡಿಕೇರಿ ತಾಲೂಕು ಘಟಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಿಗೆ ಮನವಿ ಸಲ್ಲಿಸಿದೆ.
ಈ ಸಂದರ್ಭ ಮಾತನಾಡಿದ ತಾಲೂಕು ಅಧ್ಯಕ್ಷೆ ಕೆ.ಎಸ್. ಮುತ್ತಮ್ಮ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಸಮವಸ್ತ್ರವನ್ನು ನೀಡಲಾಗುತ್ತಿದ್ದು, ಇದು ಗುಣಮಟ್ಟದಿಂದ ಕೂಡಿರದೆ ಇರುವದರಿಂದ ತೊಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸಮವಸ್ತ್ರ ನೀಡುವ ವ್ಯವಸ್ಥೆಯನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.
ಪ್ರತೀ ತಿಂಗಳು ನಡೆಸುವ ಪಿಹೆಚ್‍ಸಿ ಸಭೆಯನ್ನು ಸಂಜೆಯವರೆಗೆ ನಡೆಸುವದರಿಂದ ಗ್ರಾಮೀಣ ಭಾಗದ ಕಾರ್ಯಕರ್ತೆಯರಿಗೆ ಹಾಗೂ ಸಹಾಯಕಿಯರಿಗೆ ಮನೆಗೆ ತೆರಳಲು ತೊಂದರೆಯಾಗುವದರಿಂದ ಮಧ್ಯಾಹ್ನ 2 ಗಂಟೆಯೊಳಗೆ ಸಭೆಯನ್ನು ಮುಗಿಸಬೇಕು. ಗೌರವ ಧನವನ್ನು ಪ್ರತೀ ತಿಂಗಳು ಅವರವರ ಖಾತೆಗೆ ಜಮಾ ಮಾಡದೆ ಇರುವದರಿಂದ ಪಾವತಿಯ ಸಂದರ್ಭ ಗೊಂದಲ ಸೃಷ್ಟಿಯಾಗುತ್ತಿದೆ. ಆದ್ದರಿಂದ ಸಂಬಂಧಿಸಿದವರ ಖಾತೆಗೆ ಜಮಾ ಮಾಡಬೇಕು ಎಂದರು. ಹೆಚ್ಚುವರಿಯಾಗಿ ಸರ್ಕಾರದಿಂದ ಬಿಡುಗಡೆಯಾಗಿರುವ ರೂ. 1500 ಗೌರವ ಧನವನ್ನು ಶೀಘ್ರ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ ಮುತ್ತಮ್ಮ, ಅಂಗನವಾಡಿ ಕೇಂದ್ರಗಳಿಗೆ ಮೊಟ್ಟೆ, ತರಕಾರಿ ಮತ್ತು ಬಾಳೆಹಣ್ಣನ್ನು ಖರೀದಿಸಲು ಅನುದಾನವನ್ನು ಸಕಾಲದಲ್ಲಿ ಬಿಡುಗಡೆ ಮಾಡಬೇಕು. ವಿಳಂಬವಾದಲ್ಲಿ ಇವುಗಳನ್ನು ಖರೀದಿಸಲು ಸಾಧ್ಯವಾಗುವದಿಲ್ಲ ಎಂದು ಹೇಳಿದ್ದಾರೆ. ಅಡುಗೆ ಅನಿಲದ ಸಿಲಿಂಡರನ್ನು ಕೊಂಡುಕೊಳ್ಳುವ ಜವಾಬ್ದಾರಿಯನ್ನು ಕಾರ್ಯಕರ್ತೆಯರಿಗೆ ವಹಿಸದೆ ಕಚೇರಿಯ ಮೂಲಕವೇ ಅಡುಗೆ ಅನಿಲದ ಸಂಸ್ಥೆಗೆ ಹಣ ಪಾವತಿಯಾಗುವಂತೆ ಕ್ರಮ ಕೈಗೊಳ್ಳಬೇಕು. ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸಲಾಗುವದು ಎಂದು ಅವರು ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.