ಸೋಮವಾರಪೇಟೆ, ಡಿ. 5: ಕಳೆದ 2018ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಮನೆ ಮತ್ತು ಜಮೀನು ಕಳೆದುಕೊಂಡ ಮಾದಾಪುರ ಸುತ್ತಮುತ್ತಲ ವ್ಯಾಪ್ತಿಯ ಸಂತ್ರಸ್ತರಿಗೆ ಕೂಡಲೇ ಮನೆಗಳನ್ನು ವಿತರಿಸಲು ಸರ್ಕಾರ ಕ್ರಮವಹಿಸಬೇಕೆಂದು ಜಂಬೂರು ಸಂತ್ರಸ್ತರ ಸಂಘದ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಬಾಚಿನಾಡಂಡ ಕೆ. ಗಾಂಧಿ, ಪ್ರಕೃತಿ ವಿಕೋಪದಿಂದ ಮನೆ ಕಳೆದುಕೊಂಡವರಿಗೆ 12 ತಿಂಗಳು ಮನೆ ಬಾಡಿಗೆ ಸರ್ಕಾರ ನೀಡಿತ್ತು. ಆದರೆ ಕಳೆದ ನಾಲ್ಕು ತಿಂಗಳಿನಿಂದ ಬಾಡಿಗೆ ಹಣವನ್ನು ನಿಲ್ಲಿಸಲಾಗಿದೆ. ಇದರಿಂದ ಸಂತ್ರಸ್ತರು ಸಂಕಷ್ಟದಲ್ಲಿದ್ದಾರೆ. ಕೂಡಲೇ ಬಾಡಿಗೆ ಹಣವನ್ನು ಸರ್ಕಾರ ನೀಡಬೇಕು ಎಂದು ಒತ್ತಾಯಿಸಿದರು.

ಮೂವತ್ತೊಕ್ಲು, ಇಗ್ಗೊಡ್ಲು ಸುತ್ತಮುತ್ತಲಿನ ಸಂತ್ರಸ್ತರಿಗೂ ಸೂಕ್ತ ಸೌಲಭ್ಯಗಳು ಸಿಗುತ್ತಿಲ್ಲ. ಸಂತ್ರಸ್ತರಿಗೆ ವಿತರಿಸಲು ಜಂಬೂರಿನಲ್ಲಿ ನಿರ್ಮಾಣವಾಗಿರುವ ಮನೆಗಳನ್ನು ನೈಜ ಫಲಾನುಭವಿಗಳಿಗೆ ವಿತರಿಸಬೇಕು. ಸಂತ್ರಸ್ತರ ಮಕ್ಕಳಿಗೆ ಸರ್ಕಾರಿ ಉದ್ಯೋಗವನ್ನು ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ಆಸ್ತಿ, ಮನೆಯನ್ನು ಕಳೆದುಕೊಂಡಿರುವ ರೈತರ ಸಂಪೂರ್ಣ ಸಾಲವನ್ನು ಮನ್ನಾ ಮಾಡಬೇಕು. ಕಾಫಿ ತೋಟಗಳು ಮಣ್ಣಿನಡಿ ಸೇರಿರುವದರಿಂದ ಅಲ್ಲಿ ವ್ಯವಸಾಯ ಮಾಡಲು ಸಾಧ್ಯವಿಲ್ಲ. ಸರ್ಕಾರ ಪ್ರತ್ಯೇಕ ಜಮೀನು ನೀಡಿದರೆ, ಕೃಷಿ ಮಾಡಿಕೊಂಡು ಬದುಕುತ್ತೇವೆ ಎಂದು ಸಂಘದ ಖಜಾಂಚಿ ಜೆ.ಪಿ. ದೇವಯ್ಯ ಹೇಳಿದರು.

ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‍ನಿಂದ ಸಂತ್ರಸ್ತರಿಗೆ ನೀಡಲಾದ ಪರಿಹಾರ ಹಣ ನೈಜ ಫಲಾನು ಭವಿಗಳಿಗೆ ದೊರೆತ್ತಿಲ್ಲ. ದಾನಿಗಳು ನೀಡಿದ ಹಣವೂ ಕೂಡ ಆರ್ಹ ಫಲಾನುಭವಿಗಳಿಗೆ ಲಭಿಸಿಲ್ಲ ಎಂದು ಸಂಘದ ಉಪಾಧ್ಯಕ್ಷ ಎಂ.ಎಸ್. ರೀತ್‍ಕುಮಾರ್ ದೂರಿದರು. ಗೋಷ್ಠಿಯಲ್ಲಿ ಕಾರ್ಯದರ್ಶಿ ಜೆ.ಪಿ. ಸುಬ್ಬಯ್ಯ, ನಿರ್ದೇಶಕ ಟಿ.ಎನ್. ಶಿವರಾಮ್ ಉಪಸ್ಥಿತರಿದ್ದರು.