ಹೊದ್ದೂರು, ಡಿ. 5: ಮೂರ್ನಾಡು ಸನಿಹದ ಹೊದ್ದೂರು ವ್ಯಾಪ್ತಿಯಲ್ಲಿ ಬಿದ್ದ ಮಳೆಯು ರೈತಾಪಿ ವರ್ಗದವರ ಕೃಷಿ ಕಾರ್ಯಕ್ಕೆ ತೊಡರುಗಾಲು ಹಾಕಿದೆ. ಮಳೆಯ ನೀರಿನೊಂದಿಗೆ ಕೃಷಿಕರ ಕಣ್ಣೀರು ಬೆರಕೆಯಾಗಿ ಹರಿದು ಹೋಗುತ್ತಿದೆ.

ಇಂಚಿಗೂ ಅಧಿಕ ಮಳೆ!

ಸುಮಾರು ಗ್ರಾಮ ವ್ಯಾಪ್ತಿಯಲ್ಲಿ ಕೆಲವರು ಭತ್ತದ ಕೊಯ್ಲು ಮಾಡಿರುವರು. ಕೆಲವರು ಭತ್ತದ ಕೊಯ್ಲಿಗೆ ಸಿದ್ಧತೆ ನಡೆಸುತ್ತಿರುವಾಗಲೇ ವರುಣನ ಅವಕೃಪೆಯಿಂದಾಗಿ ಕೃಷಿಕ ವರ್ಗ ಕಂಗಾಲಾಗಿದೆ.

ನೀರುಪಾಲಾದ ಭತ್ತದ ಬೆಳೆ

ಗ್ರಾಮ ವ್ಯಾಪ್ತಿಯಲ್ಲಿ ಕೆಲವರು ಕಳೆದೆರಡು ದಿನಗಳ ಹಿಂದೆ ಭತ್ತದ ಬೆಳೆಯನ್ನು ಕಟಾವು ಮಾಡಿದ್ದರು. ಮೂರು-ನಾಲ್ಕು ದಿನಗಳ ಬಳಿಕ ಭತ್ತವನ್ನು ಒಕ್ಕಣೆ ಮಾಡಲು ಪೂರ್ವಭಾವಿ ಸಿದ್ಧತೆ ನಡೆಸಿದ್ದರು. ಕಳೆದ ವಾರದಿಂದ ಮೋಡ ಕವಿದ ವಾತಾವರಣವಿತ್ತು. ಇಂದು ಗ್ರಾಮ ವ್ಯಾಪ್ತಿಯಲ್ಲಿ ಒಂದು ಇಂಚಿನಷ್ಟು (4 ಸೆಂಟಿ ಮೀಟರ್) ಮಳೆಯಾಗಿದೆ. ಈ ಹಿನ್ನೆಲೆಯಲ್ಲಿ ದಿಢೀರ್ ಮಳೆಯಾದ ಪರಿಣಾಮ ಕೊಯ್ಲು ಮಾಡಿದ ಭತ್ತದ ಫಸಲು ಮಳೆಗೆ ಸಿಲುಕಿದೆ. ಉತ್ತಮ ಬಿಸಿಲು ಇನ್ನೆರಡು ದಿನಗಳಲ್ಲಿ ಬಾರದೇ ಹೋದಲ್ಲಿ ಬಹುತೇಕ ಭತ್ತವು ಉದುರಿ ಅಪಾರ ನಷ್ಟವಾಗುವ ಸಾಧ್ಯತೆ ಇದೆ.

ನೀರು ನಿಂತ ಗದ್ದೆಗಳು

ಭತ್ತ ಪೈರು ಕಟಾವು ಮಾಡಿದ ಗದ್ದೆಗಳಲ್ಲಿ ಮಳೆಯಿಂದಾಗಿ ನೀರು ನಿಂತಿದೆ. ಇದರ ಪರಿಣಾಮ ಕೊಯ್ಲು ಮಾಡಿದ ಭತ್ತವು ಬೆಳೆಗಾರನಿಗೆ ದಕ್ಕುವದು ಕ್ಲಿಷ್ಟಕರವಾಗಿ ತೋರುತ್ತಿದೆ. ಒಂದೆಡೆ ಬೆಳೆಗಾರರಿಗೆ ಭತ್ತವೂ ಇಲ್ಲ, ಹುಲ್ಲು ಇಲ್ಲ ಎಂಬ ಸ್ಥಿತಿ ನಿರ್ಮಾಣ ವಾಗುವ ಸ್ಥಿತಿ ಗೋಚರವಾಗುತ್ತಿದೆ. ಒಟ್ಟಾರೆ ದಿಢೀರ್ ಭಾರೀ ಮಳೆಯು ಭತ್ತ ಬೆಳೆಗಾರರು ಕಣ್ಣೀರಿನಲ್ಲಿ ಕೈತೊಳೆಯಬೇಕಾದ ಪ್ರಸಂಗ ಎದುರಾಗಿರುವದು ವಿಪರ್ಯಾಸ.

ಬಚಾವಾದ ಕೃಷಿಕರು

ಆದರೆ, ಕೆಲ ಭತ್ತ ಬೆಳೆಗಾರರು ಭತ್ತ ಕೊಯ್ಲು ಆದ ಕೂಡಲೇ ಬೆಳೆಯನ್ನು ಹೊತ್ತೊಯ್ದು ಮೆದೆ ಇಟ್ಟಿರುವರು. ಇಂತಹ ಕೆಲ ಬುದ್ಧಿವಂತ ಕೃಷಿಕರು ಮಾತ್ರ ಮಳೆಯ ಆಘಾತದಿಂದ ಬಚಾವಾಗಿದ್ದಾರೆ. ಕೆಲವರು ಭತ್ತದ ಪೈರನ್ನು ಹೊತ್ತು ರಾಶಿ ಹಾಕಿ, ಅದಕ್ಕೆ ಪ್ಲಾಸ್ಟಿಕ್ ಹೊದಿಕೆ ಮುಚ್ಚಿರುವರು. ಕೆಲವರು ಸುಬ್ರಹ್ಮಣ್ಯ ಷಷ್ಠಿಯ ಬಳಿಕ ಭತ್ತದ ಕೊಯ್ಲು ಮಾಡೋಣ ಎಂದು ಅಂದಾಜಿಸಿರು ವವರು ಮಳೆಯ ಸಂಕಟದಿಂದ ಪಾರಾಗಿದ್ದಾರೆ.

ಕಟವಾಯಿ ಕಾಫಿ ಕಣದಲ್ಲಿ

ಈ ವ್ಯಾಪ್ತಿಯಲ್ಲಿ ಅರೇಬಿಕಾ ಮತ್ತು ಕಟವಾಯಿ ತಳಿಗಳ ಕಾಫಿ ಕೊಯ್ಲು ಭರದಿಂದ ಸಾಗಿದೆ. ಬಹುತೇಕ ಬೆಳೆಗಾರರು ಕೊಯ್ಲು ಮಾಡಿದ ಕಾಫಿಯನ್ನು ಮಾರನೇ ದಿನ ಒಣಗಲು ಹಾಕುವದು ವಾಡಿಕೆ. ಆದರೆ, ಬೆಳಗಿನಿಂದಲೇ ಮೋಡ ಕವಿದ ವಾತಾವರಣವು ಕೆಲ ದಿನಗಳಿಂದ ಕಾಣಬರುತ್ತಿತ್ತು. ಆದರೂ, ಹಲವು ಬೆಳೆಗಾರರು ಕಾಫಿಯನ್ನು ಕಣದಲ್ಲಿ ಒಣ ಹಾಕಿದ್ದರು. ಸಣ್ಣ ಪ್ರಮಾಣದಲ್ಲಿ ಒಣ ಹಾಕಿದ ಕಾಫಿಯನ್ನು ಸಕಾಲಿಕವಾಗಿ ಕಾರ್ಮಿಕರು ರಾಶಿ ಮಾಡಿದ್ದಾರೆ. ನಂತರ ಅವುಗಳಿಗೆ ಪ್ಲಾಸ್ಟಿಕ್ ಹಾಳೆ ಹೊದೆಸಿದ್ದಾರೆ.

ರೋಬಸ್ಟಾ ಕಾಫಿಯು ಒದ್ದೆ

ಹವಾಮಾನದ ವೈಪರೀತ್ಯ ದಿಂದಲೋ ಏನೋ ಈ ಬಾರಿ ಬಲು ಬೇಗ ರೋಬಸ್ಟಾ ಕಾಫಿ ಹಣ್ಣಾಗಿದೆ. ಹಲವು ದೊಡ್ಡ ಬೆಳೆಗಾರರು ರೋಬಸ್ಟಾ ಕಾಫಿ ಕೊಯ್ಲು ಆರಂಭಿಸಿದ್ದರು. ಅಕಾಲಿಕವಾಗಿ ಬಂದ ಮಳೆಗೆ ಒಣ ಹಾಕಿದ್ದ ಕಾಫಿ ಕೊಚ್ಚಿ ಹೋಗಿದೆ. ಕೆಲವು ಕಡೆ ಒಣ ಹಾಕಿದ ಕಾಫಿಯು ಮಳೆಗೆ ಒದ್ದೆಯಾಗಿದೆ. ಒಟ್ಟಾರೆ, ಭಾರತದ ಕೃಷಿಕರು ಮಳೆಯೊಂದಿಗೆ ಜೂಜಾಡುತ್ತಿರುವರು ಎಂಬ ಮಾತು ಕೊಡಗಿನ ಕೃಷಿಕರ ಪಾಲಿಗೆ ನಿಜವೆನಿಸಿದೆ. ಕಳೆದೆರಡು ವರ್ಷಗಳಿಂದ ಕೊಡಗಿನ ಸುಗ್ಗಿಯ ಹಬ್ಬ ‘ಪುತ್ತರಿ’ಯ ಹಬ್ಬದಂದು ಸಹಾ ಮಳೆಯಾಗಿರುವದನ್ನು ಸ್ಮರಿಸಬಹುದಾಗಿದೆ.

- ಕೂಡಂಡ ರವಿ.