ಕುಶಾಲನಗರ, ಡಿ. 4: ಸಹಕಾರ ಸಂಘಗಳು ಗುಣಮಟ್ಟದ ಸೇವೆ ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವ ಮೂಲಕ ಗ್ರಾಹಕರನ್ನು ಸೆಳೆಯಬೇಕಿದೆ ಎಂದು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎ.ಕೆ.ಮನು ಮುತ್ತಪ್ಪ ಹೇಳಿದರು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಗ್ರಾಹಕರ ಸಹಕಾರ ಮಹಾಮಂಡಳ ಹಾಗೂ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ನಡೆದ ಗ್ರಾಹಕರ ಸಹಕಾರ ಸಂಘಗಳ ಮುಖ್ಯಕಾರ್ಯನಿರ್ವಹಣಾಧಿಕಾರಿ, ಸಿಬ್ಬಂದಿಗಳಿಗೆ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಹಕಾರ ಸಂಘಗಳು ಪ್ರಸಕ್ತ ಅತ್ಯಂತ ಸ್ಪರ್ಧೆಗಳನ್ನು ಎದುರಿಸುತ್ತಿವೆ. ವಾಣಿಜ್ಯ ಬ್ಯಾಂಕುಗಳು ನೀಡುವ ಸೇವೆಗಳಿಗೆ ಹೋಲಿಕೆ ಮಾಡಿದರೆ ಸಹಕಾರ ಸಂಘಗಳ ಆಡಳಿತ ಮಂಡಳಿ, ಅಧಿಕಾರಿ, ಸಿಬ್ಬಂದಿಗಳು ಮತ್ತಷ್ಟು ಶ್ರಮವಹಿಸಿದಲ್ಲಿ ಮಾತ್ರ ಪ್ರಗತಿ ಹೊಂದಲು ಸಾಧ್ಯ. ಇಂದಿನ ಸ್ಪರ್ಧಾತ್ಮಕ ಕಾಲಘಟ್ಟದಲ್ಲಿ ತಾಂತ್ರಿಕವಾಗಿ ಮೇಲ್ದರ್ಜೆಗೇರುವ ಮೂಲಕ ಆಲಸ್ಯ ಮನೋಭಾವನೆ, ಲಂಚಗುಳಿತನ ಬದಿಗೊತ್ತಿ ಗ್ರಾಹಕರಿಗೆ ಗುಣಮಟ್ಟದ ಸೇವೆ ಒದಗಿಸಿ ಅವರನ್ನು ಸೆಳೆದಲ್ಲಿ ಮಾತ್ರ ಸಹಕಾರ ಸಂಘಗಳು ಅಭಿವೃದ್ಧಿ ಪಥದಲ್ಲಿ ಮುನ್ನಡೆಯಲು ಸಾಧ್ಯ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ರಾಜ್ಯ ಗ್ರಾಹಕರ ಸಹಕಾರ ಮಹಾಮಂಡಳದ ನಿರ್ದೇಶಕ ಎಂ.ಬಿ.ದೇವಯ್ಯ, ಕೆಲವು ಸಹಕಾರ ಸಂಘಗಳಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ವೇತನ ಪಾವತಿ, ಸಿಬ್ಬಂದಿ ನೇಮಕಾತಿ ಮತ್ತಿತರ ಪ್ರಕ್ರಿಯೆಗಳಿಗೆ ಲಂಚ ನೀಡುವ ವ್ಯವಸ್ಥೆ ನಿರ್ಮಾಣಗೊಂಡಿದೆ. ಮತ್ತೊಂದೆಡೆ ಸರಕಾರದ ಬಿಗಿ ನೀತಿಗಳಿಂದ ಸಹಕಾರ ಸಂಘಗಳು ಲಾಭಗಳಿಸಿದರೂ ಕೂಡ ಖಾಸಗಿ ಕ್ಷೇತ್ರಗಳಿಗೆ ಸಮನಾಗಿ ಮುನ್ನಡೆಯಲು ತೊಡಕು ಉಂಟಾಗುತ್ತಿದೆ ಎಂದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕುಶಾಲನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ.ಆರ್. ಶರವಣಕುಮಾರ್ ಮಾತನಾಡಿ, ಊರು ಅಭಿವೃದ್ಧಿಗೊಂಡಂತೆ ವ್ಯಾಪಾರ ಪ್ರಮಾಣ, ಗ್ರಾಹಕರ ಸಂಖ್ಯೆ ಹೆಚ್ಚಾಗತೊಡಗಿತು. ಅದರಂತೆ ಖಾಸಗಿ ವಲಯಗಳು ಕೂಡ ಅಧಿಕ ಸಂಖ್ಯೆಯಲ್ಲಿ ಸೇವೆ ನೀಡಲು ಮುಂದಾಗಿವೆ. ಇದರಿಂದಾಗಿ ಸಹಕಾರ ಸಂಘಗಳಲ್ಲಿ ಇದ್ದಂತಹ ಗ್ರಾಹಕರ ಕೇಂದ್ರಗಳು ಕ್ರಮೇಣ ತನ್ನ ಛಾಪು ಕಳೆದುಕೊಳ್ಳಲು ಆರಂಭಿಸಿತು.

ಇದೀಗ ಪ್ರತಿಯೊಂದು ವಸ್ತುಗಳು ಕೂಡ ಆನ್‍ಲೈನ್ ಸೇವೆಗಳ ಮೂಲಕ ಗ್ರಾಹಕರ ಮನೆಬಾಗಿಲಿಗೆ ತಲುಪುತ್ತಿವೆ. ಹೀಗಾಗಿ ಗ್ರಾಹಕರ ಸಹಕಾರ ಸಂಘಗಳು ಅಭಿವೃದ್ಧಿಯಲ್ಲಿ ಹಿಂದುಳಿದಿವೆÉ. ಇದರೊಂದಿಗೆ ಸರಕಾರ ಸಹಕಾರಿ ಕ್ಷೇತ್ರವನ್ನು ನಿರ್ಲಕ್ಷಿಸುವದರೊಂದಿಗೆ ಕಾರ್ಪೋರೇಟ್ ವಲಯಕ್ಕೆ ಅನ್ವಯವಾಗುವ ರೀತಿಯ ನೀತಿಗಳು, ತೆರಿಗೆಗಳನ್ನು ಹೇರಿರುವ ಕಾರಣ ಮತ್ತಷ್ಟು ಅನಾನುಕೂಲತೆ ಉಂಟಾಗಿದೆ ಎಂದರು. ಇವೆಲ್ಲವನ್ನು ಸರಿದೂಗಿಸಲು ಇಂದಿನ ತಾಂತ್ರಿಕತೆಗಳನ್ನು ಅಳವಡಿಸಿಕೊಂಡು ಸ್ಪರ್ಧೆ ಒಡ್ಡಿದಾಗ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾದ ಎಚ್.ಎನ್. ರಾಮಚಂದ್ರ, ಎಸ್.ಪಿ.ನಿಂಗಪ್ಪ, ಎನ್.ಎ.ರವಿ ಬಸಪ್ಪ ಪಾಲ್ಗೊಂಡಿದ್ದರು.

ಬಂಟ್ವಾಳ ತಾಲೂಕಿನ ಸಹಕಾರ ಅಭಿವೃದ್ಧಿ ಅಧಿಕಾರಿ ಕೆ.ತ್ರಿವೇಣಿರಾವ್ ಸಹಕಾರ ಸಂಘಗಳಲ್ಲಿ ಪರಿಣಾಮಕಾರಿ ಆಡಳಿತ ನಿರ್ವಹಣೆ, ಮಾರಾಟ ಮತ್ತಿತರ ವಿಷಯಗಳ ಕುರಿತು ಉಪನ್ಯಾಸ ನೀಡಿದರು.

ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್ ಪ್ರಾರ್ಥಿಸಿ ಕಾರ್ಯಕ್ರಮ ನಿರ್ವಹಿಸಿದರು.