ಸೋಮವಾರಪೇಟೆ, ಡಿ.4: ಪ್ರಾಕೃತಿಕ ವಿಕೋಪದಿಂದ ಅಧಿಕೃತ ಜಾಗದಲ್ಲಿರುವ ಮನೆಗಳಿಗೆ ಹಾನಿಯಾಗಿದ್ದರೆ ಮಾತ್ರ ಸರ್ಕಾರ ನಿಗದಿಪಡಿಸಿರುವ ಗರಿಷ್ಠ ಪರಿಹಾರ ನೀಡಲಾಗುತ್ತದೆ. ಅನಧಿಕೃತ ಜಾಗದಲ್ಲಿ ನಿರ್ಮಾಣವಾದ ಮನೆಗಳಿಗೆ ಹೆಚ್ಚಿನ ಪರಿಹಾರ ನೀಡಲು ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದರು.

ಜನಪ್ರತಿನಿಧಿಗಳ ಮನವಿ ಹಿನ್ನೆಲೆ ಸಮೀಪದ ಬೇಳೂರು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ, ಪ್ರಾಕೃತಿಕ ವಿಕೋಪದಿಂದ ಹಾನಿಯಾದ ಪ್ರಕರಣಗಳ ಬಗ್ಗೆ ವರದಿ ಪಡೆದ ಜಿಲ್ಲಾಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಂತ್ರಸ್ತರ ಅಹವಾಲು ಆಲಿಸಿದರು.

ಬೇಳೂರು ಗ್ರಾ.ಪಂ.ನ ಬಜೆಗುಂಡಿ ಗ್ರಾಮದಲ್ಲಿ ಕಳೆದ 2017-18 ಮತ್ತು 2018 ಮತ್ತು 19ನೇ ಸಾಲಿನಲ್ಲಿ ಸಾಕಷ್ಟು ಪ್ರಮಾಣದ ಹಾನಿ ಸಂಭವಿಸಿದ್ದು, ಸುಮಾರು 15ಕ್ಕೂ ಅಧಿಕ ಮನೆಗಳು ಸಂಪೂರ್ಣ ಹಾನಿಗೀಡಾಗಿವೆ. ಸರ್ಕಾರದಿಂದ ಕೆಲವೇ ಮಂದಿಗೆ ಪರಿಹಾರ ಬಂದಿದೆ. ಉಳಿದವರಿಗೆ ಯಾವದೇ ಪರಿಹಾರ ಲಭಿಸಿಲ್ಲ ಎಂದು ಗ್ರಾ.ಪಂ. ಸದಸ್ಯ ಕೆ.ಎ. ಯಾಕೂಬ್ ಅವರು ಜಿಲ್ಲಾಧಿಕಾರಿಗಳ ಗಮನ ಸೆಳೆದರು.

ಬಜೆಗುಂಡಿ ಗ್ರಾಮ ಊರುಡುವೆ ಜಾಗದಲ್ಲಿದ್ದು, ಕಳೆದ 50 ವರ್ಷಗಳಿಂದಲೂ ಇಲ್ಲಿ ಜನರು ವಾಸವಿದ್ದಾರೆ. ದಾಖಲಾತಿಯ ಕೊರತೆಯಿಂದ ಪರಿಹಾರ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆ ತಾವುಗಳೇ ವಿಶೇಷ ಗಮನ ಹರಿಸಿ ಪರಿಹಾರ ಒದಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.

ಈ ಸಂದರ್ಭ ಮಾತನಾಡಿದ ಡಿ.ಸಿ., ದಾಖಲಾತಿಗಳನ್ನು ಹೊಂದಿರುವ ಅಧಿಕೃತ ಜಾಗದಲ್ಲಿ ಮನೆಗಳಿಗೆ ಹಾನಿಯಾಗಿದ್ದರೆ ಸರ್ಕಾರದಿಂದ 9.75 ಲಕ್ಷದಷ್ಟು ಗರಿಷ್ಠ ಪ್ರಮಾಣದ ಪರಿಹಾರ ನೀಡಲಾಗುವದು. ಅನಧಿಕೃತ ಜಾಗದಲ್ಲಿ ನಿರ್ಮಾಣವಾಗಿರುವ ಮನೆಗಳಿಗೆ ಹಾನಿಯಾದರೆ ಹೆಚ್ಚಿನ ಪರಿಹಾರ ನೀಡಲು ಸಾಧ್ಯವಿಲ್ಲ. ಅಂತಹವರು ಸಂತ್ರಸ್ತರಿಗೆಂದೇ ನಿರ್ಮಿಸಲಾಗಿರುವ ಮನೆಗಳಿಗೆ ತೆರಳಬಹುದು. ಅಲ್ಲಿಗೆ ತೆರಳಲು ಸಾಧ್ಯವಿಲ್ಲವೆಂದಾದರೆ ಸಂಬಂಧಿಸಿದವರು ನಮಗೆ ಅಫಿಡವಿಟ್ ಸಲ್ಲಿಸಿದರೆ ರೂ. 1ಲಕ್ಷ ಪರಿಹಾರ ಒದಗಿಸಲು ಕ್ರಮವಹಿಸುವದಾಗಿ ಭರವಸೆ ನೀಡಿದರು.

ಜಂಬೂರಿನಲ್ಲಿ ಮಾರ್ಚ್ ಒಳಗೆ ಸಂತ್ರಸ್ತರಿಗೆ ನಿರ್ಮಾಣವಾಗುತ್ತಿರುವ ಮನೆಗಳ ಕಾಮಗಾರಿ ಪೂರ್ಣ ಗೊಳ್ಳಲಿದೆ. ಎ. ಕೆಟಗರಿಯಲ್ಲಿರುವ ಸಂತ್ರಸ್ತರಿಗೆ ಪ್ರಥಮ ಆದ್ಯತೆಯ ಮೇರೆಗೆ ಮನೆಗಳ ಹಸ್ತಾಂತರ ಮಾಡಲಾಗುವದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಬಜೆಗುಂಡಿ ಗ್ರಾಮದಲ್ಲಿ ಊರುಡುವೆ ಜಾಗದಲ್ಲಿ ನಿರ್ಮಾಣವಾಗಿರುವ ಮನೆಗಳಿಗೆ ರಸ್ತೆ, ವಿದ್ಯುತ್, ನೀರು ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯ ಒದಗಿಸಲಾಗಿದೆ. 400 ಮನೆಗಳ ಪೈಕಿ 80 ಮನೆಗಳಿಗೆ ಮಾತ್ರ ಹಕ್ಕುಪತ್ರ ನೀಡಲಾಗಿದೆ. ಉಳಿದವರಿಗೆ ಹಕ್ಕುಪತ್ರ ನೀಡಿಲ್ಲ. ಜಾಗದ ದಾಖಲಾತಿಗಳ ಸಮಸ್ಯೆಯಿಂದ ಪರಿಹಾರ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಯಾಕೂಬ್ ಗಮನ ಸೆಳೆದರು. ಪಂಚಾಯಿತಿಯಿಂದ ನೀಡಲಾಗುವ ಚೆಕ್‍ಬಂದಿಯ ಆಧಾರದ ಮೇರೆ ಪರಿಹಾರ ಒದಗಿಸಲು ಕ್ರಮಕೈಗೊಳ್ಳುವಂತೆ ಜನಪ್ರತಿನಿಧಿಗಳು ಮುಂದಿಟ್ಟ ಬೇಡಿಕೆಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿಗಳು, ಊರುಡುವೆ ಜಾಗಕ್ಕೆ ಹಕ್ಕುಪತ್ರ ನೀಡಲು ಆಗುವದಿಲ್ಲ ಎಂದರು. ಬೇಳೂರು ಗ್ರಾ.ಪಂ.ಗೆ ಯಾವದೇ ಹೆಚ್ಚಿನ ಆದಾಯವಿಲ್ಲ. ಮನೆ ಮತ್ತು ನೀರಿನ ಕಂದಾಯದಿಂದಲೇ ಪಂಚಾಯಿತಿ ನಡೆಯುತ್ತಿದೆ. ಮಳೆಹಾನಿಯಿಂದ ಹೆಚ್ಚಿನ ಪ್ರಮಾಣದ ಹಾನಿಯಾಗಿದ್ದರೂ ಯಾವದೇ ಅನುದಾನ ಬಂದಿಲ್ಲ. ಕಳೆದ 11.06.2018ರಲ್ಲಿ 20 ಕಾಮಗಾರಿಗಳಿಗೆ ಸಂಬಂಧಿಸಿದಂತೆ 2.05 ಕೋಟಿ ಅನುದಾನ ಹಾಗೂ 30.06.2018ರಲ್ಲಿ 5 ಕಾಮಗಾರಿಗಳಿಗೆ ಸಂಬಂಧಿಸಿದಂತೆ 25 ಲಕ್ಷ ಅನುದಾನಕ್ಕೆ ಬೇಡಿಕೆ ಸಲ್ಲಿಸಿದ್ದರೂ, ಒಂದೇ ಒಂದು ಕಾಮಗಾರಿಗೆ ಅನುದಾನ ಬಂದಿಲ್ಲ ಎಂದು ಜನಪ್ರತಿನಿಧಿಗಳು ಅಳಲುತೋಡಿಕೊಂಡರು.

ಈ ಸಂದರ್ಭ ಸ್ಥಳದಲ್ಲಿದ್ದ ಅಭಿಯಂತರ ವೀರೇಂದ್ರ ಅವರಿಂದ ಮಾಹಿತಿ ಬಯಸಿದ ಸಂದರ್ಭ, ಬಜೆಗುಂಡಿ ಗ್ರಾಮದಲ್ಲಿ ರಸ್ತೆ ನಿರ್ಮಾಣಕ್ಕೆ 60 ಲಕ್ಷ ಹಾಗೂ ತಡೆಗೋಡೆಗಳ ನಿರ್ಮಾಣಕ್ಕೆ ತಕ್ಷಣಕ್ಕೆ 25 ಲಕ್ಷ ಅನುದಾನ ಬೇಕಾಗಬಹುದು ಎಂದರು. ವೈಯಕ್ತಿಕವಾಗಿ ಮನೆಗಳಿಗೆ ತಡೆಗೋಡೆ ನಿರ್ಮಿಸಲು ಸಾಧ್ಯವಿಲ್ಲ. ಸಾರ್ವಜನಿಕ ರಸ್ತೆಗಳ ಪಕ್ಕದಲ್ಲಿ ತಡೆಗೋಡೆ ನಿರ್ಮಿಸಬಹುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಳ್ಳಬಹುದಾದ ಕಾಮಗಾರಿಗಳನ್ನು ತಕ್ಷಣಕ್ಕೆ ತೆಗೆದುಕೊಳ್ಳುವಂತೆ ಸಹಾಯಕ ನಿರ್ದೇಶಕ ಸಂತೋಷ್ ಅವರಿಗೆ ಸೂಚಿಸಿದರು.

ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿಗೆ ಸಮಸ್ಯೆಯಾಗಿದ್ದು, ಖಾಸಗಿ ಜಾಗ ಖರೀದಿಸಲು ಉದ್ದೇಶಿಸಲಾಗಿದೆ. ಇದಕ್ಕೆ ತಾವುಗಳು ಹೆಚ್ಚಿನ ಸಹಕಾರ ನೀಡಬೇಕೆಂದು ಗ್ರಾ.ಪಂ. ಅಧ್ಯಕ್ಷೆ ಭಾಗ್ಯ ಮಂಜುನಾಥ್, ಸದಸ್ಯರಾದ ಯಾಕೂಬ್ ಅವರುಗಳು ಮನವಿ ಮಾಡಿದರು. ನಂತರ ಬಜೆಗುಂಡಿ ಗ್ರಾಮದಲ್ಲಿ ತೀರಾ ದುಸ್ಥಿತಿಗೆ ತಲಪಿರುವ ರಸ್ತೆಗಳನ್ನು ಜಿಲ್ಲಾಧಿಕಾರಿಗಳು ವೀಕ್ಷಿಸಿದರು.

ಈ ಸಂದರ್ಭ ತಾಲೂಕು ತಹಶೀಲ್ದಾರ್ ಗೋವಿಂದರಾಜು, ಕಂದಾಯ ಇಲಾಖೆಯ ವಿನು, ಗ್ರಾ.ಪಂ. ಉಪಾಧ್ಯಕ್ಷ ಸಂತೋಷ್, ಸದಸ್ಯರಾದ ಕವಿತ, ವೀಣಾ, ಅಭಿವೃದ್ಧಿ ಅಧಿಕಾರಿ ಚನ್ನಕೇಶವ ಸೇರಿದಂತೆ ಇತರರು ಉಪಸ್ಥಿತರಿದ್ದರು.